ನಮ್ಮಲ್ಲಿ ಸದಾ ಭುಗಿಲೇಳಲು ಸಿದ್ಧವಿರುವ ದುರಹಂಕಾರದ ಮೂಲ ಎಲ್ಲಿದೆ ? ನಮ್ಮ ಯಾವುದೇ ಹೆಚ್ಚುಗಾರಿಕೆಯಲ್ಲಿ ನಮಗಿರುವ ಮಮಕಾರವೇ ಅತಿಯಾದ ದುರಹಂಕಾರದ ಕೇಂದ್ರ ಬಿಂದುವಾಗಿದೆ. ಅಂತೆಯೇ ದೇಹದ ಮೇಲಿನ ಅತಿಯಾದ ಅಭಿಮಾನ ಹಾಗೂ ವ್ಯಾಮೋಹವು ನಮ್ಮಲ್ಲಿ ನಮಗರಿವಿಲ್ಲದಂತೆ ದುರಹಂಕಾರವನ್ನು ಉಂಟುಮಾಡುತ್ತದೆ. ಆ ದುರಹಂಕಾರವು ನಮ್ಮಲ್ಲಿ ಮೂಡದಿರಬೇಕಾದರೆ ದೇಹವನ್ನು ನಾವು ನಮ್ಮ ವಿನಮ್ರ ಸೇವಕನಂತೆ ರೂಪಿಸಬೇಕು. ಹಾಗೆ ಮಾಡಬೇಕಾದರೆ ನಮ್ಮ ಮನಸ್ಸನ್ನು ಅತ್ಯಂತ ಶಕ್ತಿಯುತವಾಗಿ ನಾವು ಅಣಿಗೊಳಿಸಬೇಕಾಗುತ್ತದೆ. ಸ್ವಾಮಿ ವಿವೇಕಾನಂದರು ಒಂದೆಡೆ ಹೇಳುತ್ತಾರೆ: ಮನಸ್ಸನ್ನು ಶಕ್ತಿಯುತವೂ ಶಿಸ್ತುಬದ್ಧವೂ ಆಗಿಸುವುದರಲ್ಲಿ ಜ್ಞಾನದ ಮೌಲ್ಯವು ಅಡಗಿದೆ. ದೇಹದ ನಿಜವಾದ ಶಕ್ತಿಯು ಅಡಗಿರುವುದು ಮನಸ್ಸಿನ ಆಳದಲ್ಲೇ ವಿನಾ ಕೇವಲ ದೇಹದ ಸ್ನಾಯುಗಳಲ್ಲಿ ಅಲ್ಲ. ಮನಸ್ಸಿನಲ್ಲಿ ಕೇಂದ್ರೀಕರಿಸಲ್ಪಡುವ ಶಕ್ತಿಯು ದೇಹದ ಸ್ನಾಯುಗಳಲ್ಲಿ ತುಂಬಿಕೊಂಡು ಅನಂತರ ದುಪಟ್ಟು ಹಿರಿದಾಗಿ ಪ್ರಕಟಗೊಳ್ಳುವುದು. ಆದುದರಿಂದ ಮನಸ್ಸು ನಿಜವಾದ ಅರ್ಥದಲ್ಲಿ ದೇಹದ ಒಡೆಯನೆಂದು ಹೇಳಬಹುದು. ಮನಸ್ಸು ಶುದ್ಧವಾಗಿದ್ದರೆ ಚಾರಿತ್ರವೂ ಶುದ್ಧವಾಗಿರುವುದು. ಇವೆರಡೂ ಇರುವಲ್ಲಿ ಶಕ್ತಿಯು ಅನಗತ್ಯವಾಗಿ ಪ್ರಾಸವಾಗುವುದಿಲ್ಲ. ವಿವೇಕದ ಬಲದಲ್ಲಿ ಆ ಶಕ್ತಿಯು ಸದ್ವಿನಿಯೋಗ ವಾಗುವುದು. ಆದುದರಿಂದಲೇ ಸ್ವಾಮಿ ವಿವೇಕಾನಂದರು ನಮ್ಮನ್ನು ಎಚ್ಚರಿಸುತ್ತಾರೆ: ‘ಶಕ್ತಿಯು ಇರುವುದು ಸಾಧು ಸ್ವಭಾವದಲ್ಲಿ, ಚಾರಿತ್ರ್ಯಶುದ್ಧಿಯಲ್ಲಿ, ಶುದ್ಧ ಚಾರಿತ್ರ್ಯವೊಂದೇ ಕಷ್ಟಪರಂಪರೆ ಗಳ ಅಭೇದ್ಯ ಕೋಟೆಯನ್ನು ಸೀಳಿಕೊಂಡು ಹೋಗಬಲ್ಲುದು. ದೇಹದ ಮಹತ್ವವನ್ನು ಮನಸ್ಸಿನ ಮೂಲಕ ಅರಿತಾಗಲೇ ದೇಹದ ಶಕ್ತಿಯ ಸದುಪಯೋಗವಾಗುತ್ತದೆ. ಏಕೆಂದರೆ ಅಲ್ಲಿ ಶಕ್ತಿಗಿಂತಲೂ ಮಿಗಿಲಾಗಿ ಯುಕ್ತಿ ಮತ್ತು ವಿವೇಕವೇ ಕ್ರಿಯಾಶೀಲವಾಗಿರುತ್ತದೆ.