ಬೆಂಗಳೂರು : ಸದ್ಯ ಥಾಯ್ಲೆಂಡ್ ಪ್ರವಾಸದಲ್ಲಿರುವ 73 ವರ್ಷದ ಸುಧಾಮೂರ್ತಿ ತಮ್ಮನ್ನು ರಾಜ್ಯಸಭೆಗೆ ನಾಮ ನಿರ್ದೇಶನ ಮಾಡಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿಗೆ ಧನ್ಯವಾದ ಸಲ್ಲಿಸಿದ್ದಾರೆ ‘ನಾನು ಎಂದೂ ಹುದ್ದೆ ನಿರೀಕ್ಷೆ ಮಾಡಿರಲಿಲ್ಲ. ನನ್ನನ್ನು ಕೇಂದ್ರ ಸರ್ಕಾರ ಏಕೆ ನಾಮನಿರ್ದೇಶನ ಮಾಡಿದೆ ಎಂದು ನನಗೆ ಗೊತ್ತಿಲ್ಲ. ಆದರೆ ಮಹಿಳಾ ದಿನದಂದೇ ಈ ನೇಮಕ ಆಗಿದೆ. ಇದು ನನಗೆ ಎರಡು ಅಚ್ಚರಿಯನ್ನು ನೀಡಿದೆ. ನನಗೆ ಸಂತೋಷವಾಗಿದೆ. ಪ್ರಧಾನಮಂತ್ರಿಗೆ ನಾನು ಆಭಾರಿಯಾಗಿದ್ದೇನೆ’ ಎಂದು ಅವರು ತಿಳಿಸಿದ್ದಾರೆ
ನನಗೆ ಇದು ಹೊಸ ಕ್ಷೇತ್ರ. ನಾನು ಮೊದಲು ಕುಳಿತು, ಅಧ್ಯಯನ ಮಾಡಿ ಬಳಿಕ ನಾನು ಏನು ಮಾಡಬಲ್ಲೆ ಎಂದು ಹೇಳಬಲ್ಲೆ. ಒಂದು ಕಡೆ ಸಂತೋಷವಾಗುತ್ತಿದೆ. ಮತ್ತೊಂದು ಕಡೆ ಹೊಸ ಜವಾಬ್ದಾರಿ ಸಿಕ್ಕಿದೆ. ಶಕ್ತಿ ಮೀರಿ ಕೆಲಸ ಮಾಡುತ್ತೇನೆ. ವೈಯಕ್ತಿಕವಾಗಿ ಹೇಳುವುದಾದರೆ ಬಡವರ ಪರವಾಗಿ ಕೆಲಸ ಮಾಡಲು ನನಗೆ ದೊಡ್ಡವೇದಿಕೆ ಸಿಕ್ಕಂತಾಗಿದೆ. ನನ್ನನ್ನು ನಾನು ರಾಜಕಾರಣಿ ಎಂದು ಪರಿಗಣಿಸುವುದಿಲ್ಲ” ಎಂದು ಹೇಳಿದ್ದಾರೆ. ಸುಧಾ ಅವರಿಗೆ 2006ರಲ್ಲಿ ಪದ್ಮಶ್ರೀ ಹಾಗೂ 2023ರಲ್ಲಿ ಪದ್ಮಭೂಷಣ ಸೇರಿದಂತೆ ಹಲವು ಗೌರವಗಳು ದೊರೆತಿವೆ