ಶಿವಮೊಗ್ಗ : ನಾನು ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದು, ನನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ. ಬಿಜೆಪಿ ತಂದೆ-ಮಕ್ಕಳ ಕೈಗೆ ಸಿಲುಕಿದ್ದು, ಕಾರ್ಯಕರ್ತರು ಪರದಾಡುತ್ತಿದ್ದಾರೆ. ಪಕ್ಷ ಉಳಿಸಲು ನಾನು ಹೋರಾಟ ಮಾಡುತ್ತಿದ್ದೇನೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದರು. ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ನಾನು ಪಕ್ಷೇತರ ಅಭ್ಯರ್ಥಿ ಘೋಷಣೆ ಬಳಿಕ ರಾಜ್ಯಾದ್ಯಂತ ಬೆಂಬಲ ಸಿಗುತ್ತಿದೆ. ಅಭಿಪ್ರಾಯ ಸಂಗ್ರಹ ಸಭೆ ಬಳಿಕ ಉತ್ತಮ ಬೆಂಬಲ ಎಲ್ಲೆಡೆಯಿಂದ ಸಿಗುತ್ತಿದೆ. ನಾನು ಹಿಂದುತ್ವದ ವಿಚಾರದ ಮೇಲೆ ಚುನಾವಣೆ ಮಾಡುತ್ತೇನೆ ಎಂದರು.
ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನವನ್ನು ಲಿಂಗಾಯತರಾದ ಯತ್ನಾಳ್ ಅಥವಾ ಒಕ್ಕಲಿಗರಾದ ಸಿ.ಟಿ.ರವಿಗೆ ಯಾಕೆ ಕೊಟ್ಟಿಲ್ಲ? ಪಕ್ಷ ಸಂಘಟನೆಗಾಗಿ ಅವರಿಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಬೇಕೆಂದು ನಿರ್ಧರಿಸಿದ್ದೆವು. ಆದರೆ, ಆ ನಿರ್ಧಾರ ಬಿಟ್ಟು ವಿಜಯೇಂದ್ರಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಿದರು. ಸಂಸದ ಬಿ.ವೈ.ರಾಘವೇಂದ್ರ ಲಿಂಗಾಯತ ಎಂದು ಹೇಳಿಕೊಂಡು ಚುನಾವಣೆ ಮಾಡುತ್ತಾರೆ. ಅವರು ಲಿಂಗಾಯತರಿಗೆ ಏನು ಕೊಡುಗೆ ಕೊಟ್ಟಿದ್ದಾರೆ? ಅವರಿಗೆ ಮಾತ್ರ ಲಿಂಗಾಯತರು ಸೀಮಿತ ಆಗಿಲ್ಲ. ನಮ್ಮ ಜೊತೆಗೂ ಆ ಸಮಾಜ ಇದೆ ಎಂದು ಹೇಳಿದರು. ಬಳಿಕ ಸಾಗರದ ಶೃಂಗೇರಿ ಶಂಕರ ಮಠ, ವರದಹಳ್ಳಿಯ ಶ್ರೀಧರಾಶ್ರಮಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.