Home » ಜ್ಞಾನದ ಉಗಮವಾಗಿದೆ ಉಡುಪಿ ಕ್ಷೇತ್ರ
 

ಜ್ಞಾನದ ಉಗಮವಾಗಿದೆ ಉಡುಪಿ ಕ್ಷೇತ್ರ

ಪುತ್ತಿಗೆ ಶ್ರೀಗಳು.

by Kundapur Xpress
Spread the love

ಮಧ್ವ ವಿಜಯ ಗ್ರಂಥವು ದಾಖಲಿಸಿರುವಂತೆ ಉಡುಪಿ ಕ್ಷೇತ್ರವು ಜ್ಞಾನದ ಉಗಮವಾಗಿದೆ. 800 ವರ್ಷಗಳ ಹಿಂದೆ ಇದೇ ಪ್ರದೇಶದಲ್ಲಿ ಅವತರಿಸಿದ ಜಗದ್ಗುರುಗಳಾದ ಶ್ರೀಮಧ್ವಾಚಾರ್ಯರು ವಿಶ್ವಕ್ಕೆ ಹೊಸ ಜ್ಞಾನ ಭಂಡಾರವನ್ನು ಕರುಣಿಸಿದ್ದಾರೆ. ತತ್ವವಾದದ ಉಗಮ ಕ್ಷೇತ್ರವಾದ ಉಡುಪಿ ಇಂದಿಗೂ ಜ್ಞಾನದ ಕ್ಷೇತ್ರವಾಗಿದೆ. ಇಂಥಹ ಶ್ರೇಷ್ಠ ಕ್ಷೇತ್ರವು ಇಂದು ವಿಶ್ವದ ಭೂಪಟದಲ್ಲಿ ಶಿಕ್ಷಣ -ಆರ್ಥಿಕ-ಆರೋಗ್ಯ ದ ಪ್ರಮುಖ ಕ್ಷೇತ್ರವಾಗಿ ಗುರುತಿಸಿಕೊಂಡಿದೆ. ಇಂಥಹ ಕ್ಷೇತ್ರದಲ್ಲಿ ವಿಶ್ವ ಗೀತಾ ಸಮ್ಮೇಳನವನ್ನು ನಿಮಿತ್ತವಾಗಿಸಿಕೊಂಡು ಭಾಗವಹಿಸಿದ ನೀವೆಲ್ಲರೂ ಧನ್ಯರು ಎಂದು ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣ ಮಠದ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ಶ್ರೀ ಸುಗುಣೇಂದ್ರತೀರ್ಥಶ್ರೀಪಾದರು ಸಂದೇಶ ನೀಡಿದರು

ಶ್ರೀಕೃಷ್ಣ ಮಠದಲ್ಲಿ ಕಳೆದ ಮೂರು ದಿನಗಳಿಂದ ನಡೆಯುತ್ತಿರುವ ವಿಶ್ವ ಗೀತಾ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಈ ಮೇಲಿನ ಸಂದೇಶವನ್ನು ನೀಡಿದರು. ಸಾನ್ನಿಧ್ಯ ವಹಿಸಿದ್ದ ಕಿರಿಯ ಪಟ್ಟದ ಪರಮಪೂಜ್ಯ ಶ್ರೀ ಶ್ರೀ ಸುಶ್ರೀಂದ್ರತೀರ್ಥಶ್ರೀಪಾದರು ಭಾರತೀಯರ ಅಭಿಮಾನದ ಶ್ರೇಷ್ಠ ಗ್ರಂಥವಾದ ಭಗವದ್ಗೀತೆಯ ಅರ್ಥಾನುಸಂಧಾನದೊಂದಿಗೆ ಅಭ್ಯಾಸವನ್ನು ಮಾಡಿ ಶ್ರೀಕೃಷ್ಣನ ಸನ್ನಿಧಿಯಲ್ಲಿ ಪಾರಾಯಣದ ಯಜ್ಞದಲ್ಲಿ ಭಾಗವಹಿಸಲು ಕರೆ ನೀಡಿದರು.
ಈ ಸಂದರ್ಭದಲ್ಲಿ ರಶ್ಯಾ ದೇಶದಲ್ಲಿ ವಾಸವಾಗಿರುವ ಶ್ರೀ ಸುಹಾಸ್ ಹೋತಾ ಅವರು ರಶ್ಯಾ ದೇಶದಲ್ಲಿ ಭಗವದ್ಗೀತೆಗಿರುವ ಗೌರವಾದರಗಳ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದರು. ವರಿಸ್ಸಾ ಅಸ್ಸಾಂ ಆಂಧ್ರ ಕರ್ನಾಟಕ ಪ್ರದೇಶಗಳ ವಿದ್ವಾಂಸರಿಗೆ ಕೋಟಿ ಗೀತಾ ಲೇಖನ ಯಜ್ಞದ ದೀಕ್ಷೆಯನ್ನು ನೀಡಿ ಶ್ರೀಕೃಷ್ಣ ಪ್ರಸಾದೊಂದಿಗೆ ಸನ್ಮಾನಿಸಿದರು. ಡಾ.ಬಿ.ಗೋಪಾಲಾಚಾರ್ಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆಯನ್ನು ಸಲ್ಲಿಸಿದರು

   

Related Articles

error: Content is protected !!