ಉಡುಪಿ: ಮತದಾನವು ಪ್ರತಿಯೊಬ್ಬ ನಾಗರಿಕರ ಧ್ವನಿಯಾಗಿದ್ದು, ಪ್ರಜಾಪ್ರಭುತ್ವದ ಗುಣಮಟ್ಟವನ್ನು ಸುಧಾರಿಸಲು ಸಹಕಾರಿಯಾಗುತ್ತದೆ. ಇಂತಹ ಜವಾಬ್ದಾರಿಯನ್ನು ನಾವು ಜಾಗರೂಕತೆಯಿಂದ ಯಾವುದೇ ಆಮಿಷಗಳಿಗೆ ಬಲಿಯಾಗದೇ ಚಲಾಯಿಸಬೇಕು ಎಂದು ಉಡುಪಿ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಕೆ. ಹೇಳಿದರು.
ಅವರು ಭಾನುವಾರ, ಉಡುಪಿ ನಗರದ ವಳಕಾಡು ಸರಕಾರಿ ಪ್ರೌಢಶಾಲೆಯ ಆವರಣದಲ್ಲಿ ಜಿಲ್ಲಾಡಳಿತ ಜಿಲ್ಲಾ ಸ್ವೀಪ್ ಸಮಿತಿ ಹಾಗೂ ನಗರಸಭೆ ಉಡುಪಿ ವತಿಯಿಂದ ಆಯೋಜಿಸಿದ ನಮ್ಮ ನಡೆ ಮತ ಕಟ್ಟಿ ಕಡೆ ಕಾರ್ಯಕ್ರಮದಲ್ಲಿ ಚುನಾವಣಾ ಬಾವುಟ ದ್ವಜಾರೋಹಣ ನೆರವೇರಿಸಿ, ಮಾತನಾಡಿದರು.
ಸಂವಿಧಾನದಲ್ಲಿ ನೀಡಿರುವ ಮತದಾನದ ಹಕ್ಕು ಅಮೂಲ್ಯವಾಗಿದ್ದು ಇದೇ ಏ.26 ಹಾಗೂ ಮೇ 7 ರಂದು ನಡೆಯಲ್ಲಿರುವ ಲೋಕಸಭಾ ಚುನಾವಣೆಯಲ್ಲಿ ಕಡ್ಡಾಯವಾಗಿ ಮತದಾನ ಮಾಡುವ ಮೂಲಕ ಹಕ್ಕನ್ನು ಚಲಾಯಿಸಬೇಕು ಹಾಗೂ ಗ್ರಾಮದ ಜನರಿಗೆ ಮತದಾನದ ಮಹತ್ವದ ಅರಿವನ್ನು ಮೂಡಿಸುವುದರೊಂದಿಗೆ ಮತದಾನ ಮಾಡುವಂತೆ ಉತ್ತೇಜಿಸಬೇಕು ಎಂದರು. ಜಿ.ಪಂ. ಸಿಇಓ ಹಾಗೂ ಜಿಲ್ಲಾ ಸ್ವೀಪ್ ಸಮಿತಿಯ ಅಧ್ಯಕ್ಷ ಪ್ರತೀಕ್ ಬಾಯಲ್, ನಗರಸಭಾ ಆಯುಕ್ತ ರಾಯಪ್ಪ ಶಾಲಾ ಶಿಕ್ಷಕರು ಹಾಗೂ ಮತಗಟ್ಟೆ ಮಟ್ಟದ ಅಧಿಕಾರಿ, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು