Home » ಒಂದು ಲಕ್ಷ ಲೀಡ್ ನೀಡಲು ಪೂರಕ ವಾತಾವರಣ
 

ಒಂದು ಲಕ್ಷ ಲೀಡ್ ನೀಡಲು ಪೂರಕ ವಾತಾವರಣ

ಜಿಲ್ಲಾಧ್ಯಕ್ಷರಾದ ಕಿಶೋರ್ ಕುಮರ್

by Kundapur Xpress
Spread the love

ಬೈಂದೂರು: ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಅವರಿಗೆ ಬೈಂದೂರು ವಿಧಾನಸಭಾ ಕ್ಷೇತ್ರದಿಂದಲೇ ಒಂದು ಲಕ್ಷಕ್ಕೂ ಅಧಿಕ ಲೀಡ್ ನೀಡುವ ಸಂಕಲ್ಪ ಸಾಕಾರಕ್ಕಾಗಿ ಮೇ 5ರ ಸಂಜೆ 6 ಗಂಟೆಯವರೆಗೂ ಜಿಲ್ಲಾ ಬಿಜೆಪಿಯ ಎಲ್ಲಾ ಪದಾಧಿಕಾರಿಗಳು ಬೈಂದೂರು ವಿಧಾನಸಭಾ ವ್ಯಾಪ್ತಿಯ ವಿವಿಧ ಜಿಲ್ಲಾ ಪಂಚಾಯತಿಗಳಲ್ಲಿ ಮೊಕ್ಕಾಂ ಹೂಡಲಿದ್ದಾರೆ ಎಂದು ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ಹೇಳಿದರು.
ಬೈಂದೂರು ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಕಾರ್ಯಕರ್ತರು, ಪದಾಧಿಕಾರಿಗಳು ಯಶಸ್ವಿಯಾಗಿ ಚುನಾವಣೆ ಕಾರ್ಯ ಪೂರ್ಣಗೊಳಿಸಿದ್ದು, ನಮ್ಮ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿಯವರು 1.50 ಲಕ್ಷಕ್ಕೂ ಅಧಿಕ ಮತಗಳ ಅಂತರದಲ್ಲಿ ಜಯ ಸಾಧಿಸಲಿದ್ದಾರೆ. ಅದೇ ವಿಶ್ವಾಸ, ಹುರುಪಿನೊಂದಿಗೆ ಬೈಂದೂರು ಕ್ಷೇತ್ರದಲ್ಲಿ ಚುನಾವಣ ಕಣಕ್ಕೆ ಇಳಿದಿದ್ದೇವೆ. ಬೈಂದೂರಿನಲ್ಲಿ ಸಂಘಟನಾತ್ಮಕವಾದ ಕಾರ್ಯ ತುಂಬ ಚೆನ್ನಾಗಿ ನಡೆಯುತ್ತಿದೆ. ಸಂಘಟನೆಯಲ್ಲಿ ಯಾವುದೇ ಕೊರತೆಯಿಲ್ಲ. ಮೇ 5ರ ಸಂಜೆ 6 ಗಂಟೆಯವೆರೆ ಜಿಲ್ಲಾ ಪದಾಧಿಕಾರಿಗಳು ಇಲ್ಲಿನ ಪ್ರತಿ ಜಿಲ್ಲಾ ಪಂಚಾಯತಿಗಳಲ್ಲಿ ಮೊಕ್ಕಾಂ ಹೂಡಿ ಚುನಾವಣೆ ಪ್ರಚಾರ ಪ್ರಕ್ರಿಯೆಯನ್ನು ಇನ್ನಷ್ಟು ಚುರುಕುಗೊಳಿಸಲಿದ್ದಾರೆ ಎಂದರು

1 ಲಕ್ಷಕ್ಕೂ ಅಧಿಕ ಲೀಡ್
ಪ್ರಧಾನಿ ನರೇಂದ್ರ ಮೋದಿಯವರ ಸಮರ್ಥ ನಾಯಕತ್ವ, ಬಿಜೆಪಿ ಕಾರ್ಯಕರ್ತರು ಎಂಬ ಹೆಮ್ಮೆ ಹಾಗೂ ಇಲ್ಲಿನ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಅವರ ಸಾಧನೆ. ಈ ಮೂರು ವಿಷಯದಲ್ಲಿ ಹೆಮ್ಮೆಯಿಂದ ಮತ ಕೇಳುತ್ತೇವೆ. ಈ ಕ್ಷೇತ್ರದಿಂದ ಒಂದು ಲಕ್ಷಕ್ಕೂ ಅಧಿಕ ಲೀಡ್ ನೀಡಲು ಬೇಕಾದ ಎಲ್ಲ ಪೂರಕ ವಾತಾವರಣ ನಿರ್ಮಾಣವಾಗಿದೆ. ಕಾರ್ಯಕರ್ತರು, ಮುಖಂಡರು ಶ್ರದ್ಧೆ ಹಾಗೂ ನಿಷ್ಠೆಯಿಂದ ಇನ್ನುಳಿದ ದಿನಗಳಲ್ಲಿ ಚುನಾವಣ ಕಾರ್ಯ ಮಾಡಲಿದ್ದಾರೆ. ಇಡೀ ರಾಜ್ಯದಲ್ಲೇ ಬಿಜೆಪಿ ಅತಿ ಹೆಚ್ಚು ಸ್ಥಾನ ಗೆಲ್ಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಶಾಸಕರ ಮಾದರಿ ಕಾರ್ಯ
ಶಾಸಕರಾದ ಗುರುರಾಜ ಗಂಟಿಹೊಳೆಯವರು ಬೂತ್ ಬೂತ್‌ಗಳಿಗೂ ಸಂಚರಿಸುವ ಮೂಲಕ ಸಂಘಟನಾತ್ಮಕ ಕಾರ್ಯದ ಜತೆಗೆ ಚುನಾವಣೆ ಪ್ರಚಾರ ನಡೆಸಿರುವುದು ಎಲ್ಲರಿಗೂ ಮಾದರಿಯಾಗಿದೆ. ವಿಶೇಷವಾಗಿ ಬೂತ್ ಸಂಘಟನೆ ಮೂಲಕ ಮತದಾರರನ್ನು ಸೆಳೆದಿದ್ದಾರೆ. ಅವರಿಗೆ ಅಭಿನಂದನೆಗಳು, ಅವರ ಸಂಘಟನಾತ್ಮಕ ಕಾರ್ಯಗಳು ಹೀಗೆ ಮುಂದುವರಿಯಲಿ ಎಂದು ಆಶಿಸಿದರು.
ಬೃಹತ್ ರೋಡ್ ಶೋ
ಮೇ 3ರಂದು ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಅವರು ಬೈಂದೂರಿನಲ್ಲಿ ಇರಲಿದ್ದಾರೆ. ಅಂದು ತಮಿಳುನಾಡು ರಾಜ್ಯ ಬಿಜೆಪಿ ಅಧ್ಯಕ್ಷರಾದ ಅಣ್ಣಾಮಲೈ ಅವರು ಬೈಂದೂರಿಗೆ ಬರಲಿದ್ದಾರೆ. ಅಂದು ಬೆಳಗ್ಗೆ 9.30ಕ್ಕೆ ಕೊಲ್ಲೂರಿನಲ್ಲಿ ರೋಡ್ ಶೋ ಆರಂಭವಾಗಲಿದೆ. ತದನಂತರ ವಂಡ್ಸೆ, ನೇರಳಕಟ್ಟೆ, ತಲ್ಲೂರು, ತಾರಾಪತಿ, ಉಪ್ಪುಂದ, ಕಿರಿಮಂಜೇಶ್ವರ, ಗುಜ್ಜಾಡಿ ಮಾರ್ಗವಾಗಿ ಗಂಗೊಳ್ಳಿಯಲ್ಲಿ ಬೃಹತ್ ರೋಡ್ ಶೊ ಅಂತ್ಯವಾಗಲಿದೆ ಎಂದರು.
ಮಾದರಿ ಸಂಸದರು
ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜರಿ ಮಾತನಾಡಿ, ಕೇಂದ್ರ ಸರ್ಕಾರದ ವಿವಿಧ ಯೋಜನೆಗಳನ್ನು ಸಮರ್ಥವಾಗಿ ಅನುಷ್ಠಾನ ಮಾಡಿರುವ ಬಿ.ವೈ. ರಾಘವೇಂದ್ರ ಅವರು ರಾಜ್ಯದ ಓರ್ವ ಮಾದರಿ ಸಂಸದರಾಗಿದ್ದಾರೆ. ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿದ್ದಾರೆ. ಕೇಂದ್ರ ಸರ್ಕಾರದ ಹಲವು ಯೋಜನೆಗಳು ಜನರ ಜೀವನ ಮಟ್ಟ ಸುಧಾರಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ಸರ್ಕಾರ ನೀಡುತ್ತಿರುವ ಅಕ್ಕಿಯನ್ನು ತಮ್ಮದು ಎಂಬಂತೆ ಪ್ರಚಾರ ಮಾಡುತ್ತಿದ್ದಾರೆ. ಸಂವಿಧಾನಕ್ಕೆ ನಿಜವಾದ ಶಕ್ತಿ ತುಂಬಿರುವುದು ಮೋದಿ ಸರ್ಕಾರ. ಡಾ. ಬಿ.ಆರ್. ಅಂಬೇಡ್ಕರ್ ಅವರಿಗೆ ಕಾಂಗ್ರೆಸ್ ಮೋಸ ಮಾಡಿತ್ತು, ಅವರನ್ನು ಎರಡು ಬಾರಿ ಸೋಲಿಸಿತ್ತು. ಬಿಜೆಪಿ ಸರ್ಕಾರ ಅಂಬೇಡ್ಕರ್ ಅವರಿಗೆ ಸಂಬಂಧಿಸಿದ ಐದು ಸ್ಥಳನ್ನು ಪಂಚತೀರ್ಥವಾಗಿ ಅಭಿವೃದ್ಧಿ ಪಡಿಸಿದೆ. ಹೀಗಾಗಿ ಸಂವಿಧಾನಕ್ಕೆ ಶಕ್ತಿ ತುಂಬುತ್ತಿರುವುದೇ ಬಿಜೆಪಿ ಎಂದರು.
ಮಂಡಲ ಬಿಜೆಪಿ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ, ಮಾಜಿ ಶಾಸಕರಾದ ಕೆ.ರಘುಪತಿ ಭಟ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನಕರ ಶೆಟ್ಟಿ ಹೆರ್ಗ, ಪ್ರಮುಖರಾದ ಕುತ್ಯಾರು ನವೀನ್ ಶೆಟ್ಟಿ, ಮಹೇಂದ್ರ ಪೂಜಾರಿ, ಶ್ರೀಗಣೇಶ್ ಗಾಣಿಗ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು

   

Related Articles

error: Content is protected !!