ನವದೆಹಲಿ: ಪ್ರಮಾಣವಚನ ಸ್ವೀಕಾರಕ್ಕೆ ಕೆಲವು ತಾಸುಗಳ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ಶಪಥಗ್ರಹಣ ಮಾಡಲಿರುವ ಎಲ್ಲ ಸಚಿವರನ್ನೂ ತಮ್ಮ ನಿವಾಸಕ್ಕೆ ಕರೆಸಿಕೊಂಡು ಕಿವಿಮಾತುಗಳನ್ನು ಹೇಳಿದ್ದಾರೆ. ಮಂತ್ರಿ ಮಂಡಲ ಸೇರ್ಪಡೆಗೆ ಆಯ್ಕೆಯಾದ ಸಂಸದರನ್ನು ಚಹಾ ಸೇವಿಸಲು ತಮ್ಮ ಸ್ವೀಕಾರಕ್ಕೆ ನರೇಂದ್ರ ಮೋದಿ ಆಹ್ವಾನಿಸಿದರು. 2014ರಿಂದಲೂ ಅವರು ದೆಹಲಿಯಲ್ಲಿ ಈ ಸಂಪ್ರದಾಯ ಪಾಲಿಸುತ್ತಿದ್ದಾರೆ.ಈ ಸಭೆಯಲ್ಲೇ ಬಿಜೆಪಿ, ಎನ್‌ಡಿಎ ಸಂಸದರಿಗೆ ಶಿಕ್ಷಕರ ರೀತಿ ಪಾಠ ಮಾಡಿದರು.
ತಮ್ಮ ಸಚಿವಾಲಯ ವ್ಯಾಪ್ತಿಯಲ್ಲಿ 100 ದಿನಗಳ ಕ್ರಿಯಾಯೋಜನೆಯನ್ನು ಸಿದ್ಧಪಡಿಸಿ, ಅದು ವೇಗವಾಗಿ ಜಾರಿಯಾಗುವಂತೆ ನೋಡಿಕೊಳ್ಳಿ. ತನ್ಮೂಲಕ ಎನ್‌ಡಿಎ ಸರ್ಕಾರದ ಮೂರನೇ ಅವಧಿಯಲ್ಲಿ ವಿಕಸಿತ ಭಾರತದ ಗುರಿ ಸಾಕಾರವಾಗಲು ನೆರವಾಗಿ ಎಂದು ಮನವಿ ಮಾಡಿದರು ಎಂದು ಮೂಲಗಳು ತಿಳಿಸಿವೆ.
ಸರ್ಕಾರದ ಮೇಲೆ ಜನರ ವಿಶ್ವಾಸ ಇರುವಂತೆ ಮಾಡಲು ಪರಿಶ್ರಮದಿಂದ ದುಡಿಯಿರಿ. ಬಾಕಿ ಇರುವ ಯೋಜನೆಗಳನ್ನು ವಿಳಂಬ ಮಾಡದೆ ತ್ವರಿತವಾಗಿ ಜಾರಿಗೊಳಿಸಿ ಎಂದರು. ಅಲ್ಲದೆ, ತಮ್ಮ ಮೇಲೆ ಮಹತ್ತರ ಜವಾಬ್ದಾರಿ ವಹಿಸಲಾಗುತ್ತಿದ್ದು, ಎಲ್ಲರಿಗೂ ಶುಭವಾಗಲಿ ಎಂದು ಹಾರೈಸಿದರು ಎಂದು ಮೂಲಗಳು ವಿವರಿಸಿವೆ.