ಕೋಟ : ನವರಾತ್ರಿಯಲ್ಲಿ ಮನೆಯಂಗಳಕ್ಕೆ ಹೂವಿನಕೋಲು ಹಿಡಿದು ಬರುವ ಮಕ್ಕಳನ್ನು ಗೌರವಿಸುವುದು ಸಂಸ್ಕೃತಿ. ಮನೆಗಳಲ್ಲಿ ಕಾರ್ಯಕ್ರಮ ಮಾಡಿಸುವುದು ಸಂಪ್ರದಾಯ. ಸಂಸ್ಕೃತಿ, ಸಂಪ್ರದಾಯಗಳು ನಾಶವಾಗುತ್ತಿರುವ ಹೊತ್ತಿನಲ್ಲಿ ಮನೆ ಮನೆಗಳಿಗೆ ತೆರಳಿ ಹೂವಿನಕೋಲು ಪರಿಚಯಿಸುವ ಕಾರ್ಯವನ್ನು ಮಾಡುತ್ತಿರುವ ಸಂಸ್ಥೆಯನ್ನು ಸಮಾಜ ಗೌರವಿಸಬೇಕು. ಯಶಸ್ವೀ ಕಲಾವೃಂದ ಕೊಮೆ ಹಲವಾರು ವರ್ಷಗಳಿಂದ ಈ ಕಾರ್ಯವನ್ನು ಕೈಗೆತ್ತಿಕೊಂಡು ನಡೆಸುವ ಸಾಹಸದಲ್ಲಿ ಪರಿಣತರು. ಇನ್ನಷ್ಟು ಈ ಸಂಸ್ಕೃತಿಯನ್ನು ಬೆಳೆಸುವ, ಬೆಳಗುವ ಶಕ್ತಿಯನ್ನು ಮನೆಗಳಲ್ಲಿ ಸಾಂಸ್ಕೃತಿಕ ಪ್ರಜ್ಞೆ ಇರುವ ಮಂದಿ ಅವಕಾಶ ಕೊಡುವುದರ ಮೂಲಕ ಹೆಚ್ಚಿಸಬೇಕು ಎಂದು ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ ಸಿ. ಕುಂದರ್ ಮರು ಚಾಲನೆ ನೀಡಿ ಮಾತನ್ನಾಡಿದರು.
ಯಶಸ್ವೀ ಕಲಾವೃಂದ ಕೊಮೆ ತೆಕ್ಕಟ್ಟೆ ನೇತೃತ್ವದಲ್ಲಿ ಅಕ್ಟೋಬರ್ 4ರಂದು ನವರಾತ್ರಿಯ ಸಂದರ್ಭದ ಹೂವಿನಕೋಲು ಅಭಿಯಾನ ಕಾರ್ಯಕ್ರಮವನ್ನು ‘ಸಿನ್ಸ್ 1999 ಶ್ವೇತಯಾನ-64’ ಕಾಯಕ್ರಮದಡಿಯಲ್ಲಿ ಚಾಲನೆ ನೀಡಿ ಆನಂದ ಸಿ. ಕುಂದರ್ ಮಾತನ್ನಾಡಿದರು.
ಉದ್ಯಮಿ ಪ್ರಶಾಂತ್ ಕುಂದರ್, ಪ್ರಾಚಾರ್ಯ ದೇವದಾಸ್ ರಾವ್ ಕೂಡ್ಲಿ, ಹಂಗಾರಕಟ್ಟೆ ಕೇಂದ್ರದ ಗುರುಗಳು, ಕಲಾವಿದರು ಹಾಗೂ ಯಶಸ್ವೀ ಕಲಾವೃಂದದ ಕಲಾವಿದರು ಉಪಸ್ಥಿತರಿದ್ದರು. ಬಳಿಕ ಗೋಪಾಡಿ, ಕುಂಭಾಶಿ, ಕೋಟ, ಹಂದಟ್ಟು ಹೀಗೆ ನಾಲ್ಕು ತಂಡಗಳು ಬೇರೆ ಬೇರೆ ಮನೆಗಳಲ್ಲಿ ಹೂವಿನಕೋಲು ಕಾರ್ಯಕ್ರಮ ನೀಡುವುದಕ್ಕೆ ತೆರಳಿದರು.