ಕಟಪಾಡಿ : ವಿದ್ಯಾರ್ಥಿಗಳಿಗೆ ಈಗಿನಿಂದಲೇ ವಾಣಿಜ್ಯೋದ್ಯಮದ ಬಗ್ಗೆ ಅರಿವು ಮೂಡಿಸುವ ಸಲುವಾಗಿ ತ್ರಿಶಾ ಸಂಸ್ಥೆ ಅಟಲ್ ಇನ್ಕ್ಯೂಬೇಶನ್ ಸೆಂಟರ್, ನಿಟ್ಟೆ ಯೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದು ಈ ಕಾರ್ಯಕ್ರಮವು ಕಟಪಾಡಿಯ ತ್ರಿಶಾ ವಿದ್ಯಾ ಕಾಲೇಜಿನಲ್ಲಿ ನವೆಂಬರ್ 4 ರಂದು ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಅಟಲ್ ಇನ್ಕ್ಯೂಬೇಶನ್ ಸೆಂಟರ್ (ಎಐಸಿ) ನ ಚೀಫ್ ಎಕ್ಸಿಕ್ಯೂಟಿವ್ ಆಫೀಸರಾದ ಡಾ. ಎ ಪಿ ಆಚಾರ್ ರವರು ಪ್ರಸ್ತುತ ಕಾಲಘಟ್ಟದಲ್ಲಿ ಕೌಶಲ್ಯಗಳನ್ನು ವೃದ್ಧಿಸಿಕೊಂಡು ಹೊಸ ಹೊಸ ಆಲೋಚನೆಯೊಂದಿಗೆ ಉದ್ಯಮಿಯಾಗುವ ಕನಸಿದ್ದವರಿಗೆ ಬೇಡಿಕೆ ಹೆಚ್ಚಿದೆ ಎಂದರು. ಹಾಗೂ ವಿದ್ಯಾರ್ಥಿಗಳಿಗೆ ಯಶಸ್ವಿ ಉದ್ಯಮಿಯಾಗಲು ಮಾರ್ಗದರ್ಶನ ನೀಡಿದರು ಮತ್ತು ಎಐಸಿ ವಿದ್ಯಾರ್ಥಿಗಳ ಹೊಸ ಆವಿಷ್ಕಾರಗಳಿಗೆ ಸಹಾಯ ಮಾಡುತ್ತದೆ ಎಂದರು.
ಪ್ರತಿಯೊಂದು ಸಮಸ್ಯೆಯನ್ನು ಅದರ ಮೂಲಕ್ಕೆ ಇಳಿದು ಪರಿಶೀಲಿಸಿದಾಗ ಹೊಸ ಅವಕಾಶಗಳು ದೊರೆಯುತ್ತವೆ. ಜೀವನದಲ್ಲಿ ಕಠಿಣ ನಿರ್ಧಾರಗಳು ಮಾತ್ರ ನಮ್ಮನ್ನು ಎತ್ತರಕ್ಕೇರಿಸುತ್ತವೆ ಎಂದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ತ್ರಿಶಾ ಸಂಸ್ಥೆಯ ಸಂಸ್ಥಾಪಕರು ಸಿಎ ಗೋಪಾಲಕೃಷ್ಣ ಭಟ್ ಹೇಳಿದರು.
ಕಾರ್ಯಕ್ರಮದಲ್ಲಿ ತ್ರಿಶಾ ಸಂಸ್ಥೆಯ ಶೈಕ್ಷಣಿಕ ಸಲಹೆಗಾರರಾದ ನಾರಾಯಣ್ ಕಾಯರ್ ಕಟ್ಟೆ , ತ್ರಿಶಾ ಸಂಸ್ಥೆಯ ಸಿಬ್ಬಂದಿ ವರ್ಗದವರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ತ್ರಿಶಾ ವಿದ್ಯಾ ಕಾಲೇಜು ಕಟಪಾಡಿಯ ಪ್ರಾಂಶುಪಾಲರಾದ ಪ್ರೊ. ನಾರಾಯಣ್ ರಾವ್ ಸ್ವಾಗತಿಸಿ, ಪ್ರಾಧ್ಯಾಪಕರಾದ ನಿಧಿ ಎನ್ ಪೈ ನಿರೂಪಿಸಿ, ಚೇತನಾ ವಂದಿಸಿದರು.