ಮಹಾಕುಂಭ ನಗರ : ಮೌನಿ ಅಮಾವಾಸ್ಯೆಯ ಹಿನ್ನೆಲೆ ಮಹಾಕುಂಭ ಮೇಳ ವಿಶೇಷ ಕಳೆಗಟ್ಟಿತ್ತು. ಎರಡನೇ ಅಮೃತ ಸ್ನಾನದ ಭವ್ಯತೆಗೆ ದೇಶ ವಿದೇಶಗಳಿಂದ ಆಗಮಿಸಿದ್ದ ಹಿಂದು ಅನುಯಾಯಿಗಳು ಸಾಕ್ಷಿಯಾದರು. ತ್ರಿವೇಣಿ ಸಂಗಮದಲ್ಲಿ 6 ಕೋಟಿ ಜನರು ಅಮೃತ ಸ್ನಾನ ಮಾಡಿ ಪುನೀತರಾದರು.
ಸನಾತನ ಧರ್ಮದಲ್ಲಿ ಮೌನಿ ಅಮಾವಾಸ್ಯೆಯಂದು ತ್ರಿವೇಣಿ ಸಂಗಮದಲ್ಲಿ ಸ್ಥಾನ ಮಾಡುವುದರಿಂದ ಮೋಕ್ಷ ಪ್ರಾಪ್ತಿಯಾಗುವುದೆಂಬ ನಂಬಿಕೆ ಇದ್ದು, ಅಮೃತ ಸ್ನಾನಕ್ಕಾಗಿ ಕೋಟ್ಯಂತರ ಭಕ್ತರು ಆಗಮಿಸಿದ್ದರು. ಜತೆಗೆ ಪಿತೃ ದೋಷದಿಂದಲೂ ಮುಕ್ತರಾಗಬಹುದೆಂಬ ನಂಬಿಕೆ ಹಿನ್ನೆಲೆಯಲ್ಲಿ ಬುಧವಾರ ಮಹಾಕುಂಭನಗರದಲ್ಲಿ ಜನಸಾಗರವೇ ನೆರೆದಿತ್ತು.
ಮೌನಿ ಅಮಾವಾಸ್ಯೆಗೆ ಒಂದು ದಿನ ಮೊದಲು ಅಂದರೆ ಮಂಗಳವಾರ ಸುಮಾರು ಐದು ಕೋಟಿ ಜನರು ಮಹಾಕುಂಭ ನಗರಕ್ಕೆ ತಲುಪಿದ್ದರು. ಬುಧವಾರ, ಸಂಪ್ರದಾಯದ ಪ್ರಕಾರ, ಸನ್ಯಾಸಿ, ಬೈರಾಗಿ ಮತ್ತು ಉದಾಸೀನ್ ಮೂರು ಪಂಥಗಳಿಗೆ ಸೇರಿದ ಅಖಾಡಗಳ ಸಾಧುಗಳು ಅಮೃತ ಸ್ಥಾನ ಮಾಡಿದರು. ಮಂಗಳವಾರದವರೆಗೆ ಮಹಾಕುಂಭಕ್ಕೆ 19.94 ಕೋಟಿ ಜನರು ಆಗಮಿಸಿರುವುದಾಗಿ ಉತ್ತರ ಪ್ರದೇಶ ಮಾಹಿತಿ ಇಲಾಖೆ ತಿಳಿಸಿದೆ.
ಮೂವತ್ತು ಮಂದಿ ಸಾವು
ಪ್ರಯಾಗ್ರಾಜ್: ಮಹಾ ಕುಂಭ ಮೇಳದ ಸಂಗಮ ಸ್ಥಾನದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 30 ಮಂದಿ ಮೃತಪಟ್ಟಿದ್ದಾರೆ. ಮಹಾಕುಂಭ ಮೇಳ ದಲ್ಲಿ ಮಂಗಳವಾರ ತಡರಾತ್ರಿ 1-2 ಗಂಟೆ ನಡುವೆ ನಡೆದ ಕಾಲ್ತುಳಿತದಲ್ಲಿ 30 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಆ ಪೈಕಿ 25 ಮಂದಿಯನ್ನು ಗುರುತಿಸಲಾಗಿದ್ದು, ಉಳಿದ ಐವರನ್ನು ಗುರುತಿಸುವ ಕೆಲಸ ನಡೆಯುತ್ತಿದೆ ಎಂದು ಡಿಐಜಿ ವೈಭವ್ ಕೃಷ್ಣ ಹೇಳಿದ್ದಾರೆ.