ಬೆಂಗಳೂರು : ರಾಜ್ಯ ಬಿಜೆಪಿಯಲ್ಲಿ ಬಿರುಸಿನ ಚಟುವಟಿಕೆಗಳು ನಡೆದಿರುವ ಮಧ್ಯೆಯೇ ಮಾಜಿ ಸಚಿವ ಅರವಿಂದ ಲಿಂಬಾವಳಿ ಅವರು ದಿಢೀರ್ ದೆಹಲಿಗೆ ತೆರಳಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿ ಮಾಡಿರುವುದು ಕುತೂಹಲ ಮೂಡಿಸಿದೆ.
ಶುಕ್ರವಾರ ಇತ್ತ ಬೆಂಗಳೂರಿನಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಬಣದ ನಾಯಕರು ಸಭೆ ಮಾಡುತ್ತಿದ್ದರೆ ಅತ್ತ ಲಿಂಬಾವಳಿ ಅವರು ದೆಹಲಿ ತಲುಪಿ ನಡ್ಡಾ ಅವರೊಂದಿಗೆ ಸುದೀರ್ಘ ಸಮಾಲೋಚನೆ ನಡೆಸಿದರು.
ಇತ್ತೀಚಿನ ವಕ್ಸ್ ಆಸ್ತಿ ವಿವಾದ ಕುರಿತ ಹೋರಾಟದ ಕುರಿತ ವರದಿಯನ್ನು ನಡ್ಡಾ ಅವರಿಗೆ ನೀಡಿದ ಲಿಂಬಾವಳಿ ಅವರು ಹೋರಾಟದ ಕುರಿತು ವಿವರಿಸಿದರು. ಜತೆಗೆ ವಕ್ಸ್ ಹೋರಾಟದ ಬಗ್ಗೆ ಸಂಸತ್ತಿನ ಜಂಟಿ ಸ್ಥಾಯಿ ಸಮಿತಿ ಅಧ್ಯಕ್ಷ ಜಗದಾಂಬಿಕಾ ಪಾಲ್ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದನ್ನು ನಡ್ಡಾ ಗಮನಕ್ಕೆ ತಂದರು ಎಂದು ಮೂಲಗಳು ತಿಳಿಸಿವೆ. ಇದೇ ವೇಳೆ ರಾಜ್ಯ ಬಿಜೆಪಿಯಲ್ಲಿನ ಪ್ರಸಕ್ತ ವಿದ್ಯಮಾನಗಳ ಬಗ್ಗೆಯೂ ಲಿಂಬಾವಳಿ ಅವರು ನಡ್ಡಾ ಅವರೊಂದಿಗೆ ಚರ್ಚೆ ನಡೆಸಿದರು ಎನ್ನಲಾಗಿದೆ.