Home » ಇಂದು ಚತುಃಪವಿತ್ರ ನಾಗಮಂಡಲೋತ್ಸವ : ವಿಶೇಷ ಲೇಖನ
 

ಇಂದು ಚತುಃಪವಿತ್ರ ನಾಗಮಂಡಲೋತ್ಸವ : ವಿಶೇಷ ಲೇಖನ

by Kundapur Xpress
Spread the love

ಭಕ್ತ ಜನರ ಸಕಲ ಆಶೋತ್ತರಗಳನ್ನು ಈಡೇರಿಸುವ ಕಾರಣಿಕೆಯ ಕ್ಷೇತ್ರಗಳು  ವಿಶೇಷವಾಗಿ ನಾಗಾರಾಧನೆಯ ಕ್ಷೇತ್ರಗಳು ಕರಾವಳಿ ಜಿಲ್ಲೆಯಾದ್ಯಂತ ಅಪಾರ ಸಂಖ್ಯೆಯಲ್ಲಿದ್ದು ಅಂತಹವುಗಳಲ್ಲಿ ಒಂದು ಕುಂದಾಪುರ ನಗರದ ಮಾರ್ಕೆಟ್‌ ರಸ್ತೆಯಲ್ಲಿರುವ ಶ್ರೀ ನಾಗಬೊಬ್ಬರ್ಯ ದೇವಸ್ಥಾನ

ಈ ಕ್ಷೇತ್ರದಲ್ಲಿ ಇಂದು ನಡೆಯುವ ನಾಗಮಂಡಲೋತ್ಸದ ಪೂರ್ವಭಾವಿಯಾಗಿ ಅನೇಕ ಧಾರ್ಮಿಕ ವಿಧಿ ವಿಧಾನಗಳು ನೆರವೇರಿದ್ದು ಇಂದು ಫೆ.2 ಆದಿತ್ಯವಾರ ಸಕಲ ಸಂಭ್ರಮೋಲ್ಲಾಸಗಳೊಂದಿಗೆ ನಾಗಮಂಡಲ ಸೇವೆಯು ಜರುಗಲಿದೆ

ಇಂದಿಗೂ ಶ್ರೀ ನಾಗ ದೇವರ ಕೃಪೆಗೆ ಪಾತ್ರರಾಗಲು ಪ್ರಾಪಂಚಿಕ ದುರಿತಗಳಿಂದ, ರೋಗ-ರುಜಿನಗಳಿಂದ, ಕೌಟುಂಬಿಕ ಸಂಕಷ್ಟಗಳಿಂದ ಪಾರಾಗಲು ದೂರದೂರದ ಊರುಗಳಿಂದ ಭಕ್ತ ಜನರ ಪ್ರವಾಹವೇ ನಾಗಮಂಡಲಕ್ಕೆ ಹರಿದು ಬರುತ್ತದೆ ಅದೆಷ್ಟೋ ಸಹಸ್ರ ಮಂದಿ ಆಸ್ತಿಕರು ಶ್ರೀ ನಾಗ ಬೊಬ್ಬರ್ಯನ ಕೃಪೆಗೆ ಪಾತ್ರರಾಗಿ ತಮ್ಮ ದುರಿತಗಳಿಂದ, ಕಷ್ಟಕೋಟಲೆಗಳಿಂದ, ರೋಗ-ರುಜಿನಗಳಿಂದ ಪಾರಾಗಿದ್ದಾರೆ

ಪ್ರಾಚೀನರ ನಾಗಾರಾಧನೆ ಕಲೆ

ಸಾಮಾನ್ಯವಾಗಿ ಮನೋರಂಜನೆಯ ಸಾಧನವಾದ ಕಲೆಯನ್ನು ಪ್ರಾಚೀನರು ದೇವತಾರಾಧನೆಗೆ ಉಪಯೋಗಿಸಿಕೊಂಡರು.ಇದರಿಂದ ಕಲೆಯ ವಿಷಯದಲ್ಲಿ ರುಚಿ ಶುದ್ದಿಯನ್ನು ಬೆಳೆಸಿಕೊಳ್ಳಲು ಮಾತ್ರವಲ್ಲ, ಕೀಳು ಮಟ್ಟದ ರಂಜನೆಗಾಗಿ ಕಲೆಯ ದುರುಪಯೋಗವನ್ನು ತಡೆಯಲು ಕೂಡ ಅವರಿಗೆ ಸಾಧ್ಯವಾಯಿತು. ಕಲೆ ವಿಕಾರ ಹೊಂದುವ ವೇಗ ಕಡಿಮೆಯಾಯಿತು. ತಮ್ಮ ಪ್ರಯತ್ನದ ಫಲವಾಗಿ ಉತ್ತಮ ಮಟ್ಟವನ್ನು ತಲುಪಿದಾಗ ಇಷ್ಟ ದೈವ ದೇವತೆಗೂ ಪ್ರೀತಿಯಾಯಿತೆಂದು ಮಾನಸಿಕ ಸಮಾಧಾನ ಸಂತೃಪ್ತಿಯನ್ನು ಅವರು ಕಂಡು ಕೊಂಡಿದ್ದರು

ನಾಗಸೇವೆಗಳ ವಿಶೇಷ :

ನಾಗಸೇವೆಗಳಲ್ಲೆಲ್ಲ ವಿಶೇಷವಾದುದು ಹಾಗೂ ಹೆಚ್ಚು ಖರ್ಚಿನದು ಎಂದರೇ ಅದು ನಾಗಮಂಡಲ.ನಾಗ ತುಂಬ ಶುದ್ಧತೆಯನ್ನು ಪವಿತ್ರತೆಯನ್ನು ಇಷ್ಟ ಪಡುವ ದೇವತೆ, ಆದುದರಿಂದ ಪವಿತ್ರ ಗಂಟಿನ ಮಂಡಲವನ್ನು ರಂಗೋಲಿಯಿಂದ ಬರೆದು ಅದರ ಸುತ್ತ ನರ್ತನ ಸೇವೆ ನಡೆಯುತ್ತದೆ. ಒಂದು ಪವಿತ್ರ, ನಾಲ್ಕು ಪವಿತ್ರ, ಎಂಟು ಪವಿತ್ರ, ಹನ್ನೆರಡು ಪವಿತ್ರ ಹಾಗೂ ಹದಿನಾರು ಪವಿತ್ರದ ಗಂಟುಗಳನ್ನು ತನ್ನ ಸುದೀರ್ಘ ಮೈಯಿಂದಲೇ ಹಾಕಿ, ಹೆಡೆಬಿಚ್ಚಿ ಕುಳಿತ ನಾಗನ ಮಂಡಲಗಳನ್ನು ಬರೆಯುವ ಕ್ರಮ ಇದೆ.

ಈ ಸೇವೆ ನಡೆಯುವಲ್ಲಿ ಅನ್ನ ಸಂತರ್ಪಣೆಗೆ ಭಾರೀ ಮಹತ್ವ ಅಲ್ಲಿ ಆ ದಿನ ಅನ್ನಕ್ಕೆ ಕೊರತೆಯಾಗಬಾರದು.ಯಾವೊಬ್ಬನೂ ಅನ್ನ ಸಿಗದೆ ನಿರಾಶನಾಗಬಾರದು ಎಂಬ ಕಟ್ಟಳೆ ಇದೆ. ಈ ಸೇವೆ ತುಂಬ ಅಪೂರ್ವವೂ ಆದುದರಿಂದ ಜನರು ಅಧಿಕ ಸಂಖ್ಯೆಯಲ್ಲಿ ಸೇರುತ್ತಾರೆ. ಕೆಲವೆಡ 1020 ರಿಂದ 30 ಸಾವಿರದವರೆಗೂ ಭಕ್ತರು ಸೇರುತ್ತಾರೆ ಅಷ್ಟೊಂದು ಜನಕ್ಕೆ ತೃಪ್ತಿಯಾಗುವಷ್ಟು ಉಣಬಡಿಸುವ ವ್ಯವಸ್ಥೆ ಮಾಡುವುದು ಸುಲಭದ ವಿಚಾರವೇನಲ್ಲ, ಇದಕ್ಕೆ ಸಾಕಷ್ಟು ಧನಬಲ ಹಾಗೂ ಜನಬಲವೂ ತೀರಾ ಅಗತ್ಯ

ಕುಂದಾಪುರ ಮಾರ್ಕೆಟ್‌ ರಸ್ತೆಯ ನಾಗಬೊಬ್ಬರ್ಯ ನಾಗಬನದ ಬಳಿಯ ಗದ್ದೆಯಲ್ಲಿ ದೊಡ್ಡ ಚಪ್ಪರ ಹಾಕಲಾಗಿದೆ ಈ ಚಪ್ಪರದಲ್ಲಿ ನಾಗಮಂಡಲದ ಸ್ಥಳದಲ್ಲಿ ರಂಗೋಲಿ ಬರೆಯಲಾಗಿದ್ದು ತೆಂಗಿನ ಎಳೆಯ ಗರಿಗಳಿಂದ, ಕೆಂದಾಳಿಯ ಎಳನೀರ ಗೊನೆ, ಬಾಳೆ ಹಣ್ಣಿನ ಗೊನೆ ಸಿಂಗಾರ ಹೂಗಳಿಂದ  ನಾಗ ಮಂಡಲದ ಸ್ಥಳವನ್ನು ಅಲಂಕರಿಸಲಾಗಿದೆ ಮಧ್ಯಾಹ್ನ ಸಂತರ್ಪಣೆಗೆ ಮುನ್ನ ಅನ್ನದ ರಾಶಿಯ ಪೂಜೆಯ ವೇಳೆ ನಾಗಪಾತ್ರಿಯಿಂದ ಆವೇಶಪೂರ್ಣ ದರ್ಶನ ಹಾಗೂ ಪೂಜೆಯ ನಂತರ ಅನ್ನ ಸಂತರ್ಪಣೆಯು ಜರುಗಲಿದೆ

ಸಂಜೆಯ ಪ್ರದೋಷ ಕಾಲದಲ್ಲಿ ‘ಹಾಲು ಹಿಟ್ಟಿನ ಸೇವೆ ನೆರವೇರಿಸುತ್ತಾರೆ. ಆಗ ಆರಸಿನ ಬೆರಸಿದ ಹಾಲನ್ನು ನಾಗನಿಗೆ ಅಭಿಷೇಕ ಮಾಡುತ್ತಾರೆ. ಈ ಸಂದರ್ಭದಲ್ಲಿಯೂ ಆವೇಶಕ್ಕೆ ಒಳಗಾದ ನಾಗಪಾತ್ರಿಯಿಂದ ಪ್ರಸಾದವನ್ನು ಸ್ವೀಕರಿಸಿದ ”ವೈದ್ಯ”ರ ತಂಡ ನಾಗಮಂಡಲದ ರಂಗವಲ್ಲಿ ಬರೆಯುತ್ತಾರೆ

ವೈದ್ಯ ಎಂಬ ಕುಲನಾಮದ ಈ ಜನರಿಗೆ ನಾಗಮಂಡಲ, ಬ್ರಹ್ಮಮಂಡಲ, ಧಕ್ಕೆ ಬಲಿಗಳಲ್ಲಿ ನರ್ತಿಸುವುದು, ಡಕ್ಕೆ ಬಾರಿಸುವುದೇ ಪರಂಪರಾಗತ ಕಸುಬು. ಈ ವೈದ್ಯರ ಸಂಖ್ಯೆ ಇತ್ತೀಚೆಗೆ ಕ್ಷೀಣಿಸಿದೆಯಲ್ಲದೆ ನಾಗಮಂಡಲದ ವಿಶಿಷ್ಟ ಹಾಡುಗಳು, ಹಾಡುವ ಮಟ್ಟು, ಕುಣಿತಗಳ ಪರಂಪರೆ ಇಂದಿನ ಕಾಲದಲ್ಲಿ ನಶಿಸುತ್ತಿರುವುದೇ ವಿಷಾದದ ಸಂಗತಿಯಾದರೂ ಇಂದಿನ ಆಧುನಿಕ ಯುಗದಲ್ಲಿಯೂ ನಾಗಮಂಡಲದ ಸೇವೆಯು ಹಲವೆಡೆಗಳಲ್ಲಿ ನಡೆಯುತ್ತಿರುವುದು ಸಂತೋಷದ ಸಂಗತಿಯಾಗಿದ್ದು ಕಲಿಯುಗದಲ್ಲಿ ಕಣ್ಣಿಗೆ ಕಾಣುವ ಪ್ರತ್ಯಕ್ಷ ದೇವರಾಗಿ ನಾಗೇಂದ್ರ ನೆಲೆನಿಂತಿದ್ದಾನೆ

ಕೆ.ಗಣೇಶ್‌ ಹೆಗ್ಡೆ, ಕುಂದಾಪುರ

 

Related Articles

error: Content is protected !!