ನವದೆಹಲಿ : ದೇಶದ ಆರ್ಥಿಕ ಬೆನ್ನೆಲುಬು ಎಂದೇ ಗುರುತಿಸಿಕೊಂಡಿರುವ ಮಧ್ಯಮ ವರ್ಗವನ್ನು ಗುರಿಯಾಗಿಸಿಕೊಂಡು, ಎಲ್ಲರನ್ನೂ ಸಂತಸಪಡಿಸುವ ಬಜೆಟ್ ಮಂಡಿಸಿದ್ದಾರೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್
ಬಡವರು, ಅನ್ನದಾತ, ಯುವಕರು, ಮಹಿಳೆಯರು, ಶಿಕ್ಷಣ ಕ್ಷೇತ್ರಗಳ ಮೇಲೂ ಹೆಚ್ಚಿನ ಗಮನ ನೀಡಲಾಗಿದೆ. ಅತ್ತ ಬೃಹತ್ ಕೈಗಾರಿಕೆಗಳಿಗಿಂತ ಸಣ್ಣ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕೆಗಳಿಗೆ ಹೆಚ್ಚಿನ ಮಹತ್ವ ನೀಡಿ ಸರ್ವರನ್ನೂ ಖುಷಿಪಡಿಸುವಲ್ಲಿ ನಿರ್ಮಲಾ ಸೀತಾರಾಮನ್ ಯಶಸ್ವಿಯಾಗಿದ್ದಾರೆ.
ಮಧುಬನಿ ಸೀರೆಯುಟ್ಟ ಸಚಿವೆ
8 ನೇ ಬಜೆಟ್ ಮಂಡಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಈ ಬಾರಿ ಬಿಳಿ ಬಣ್ಣದ ಮಧುಬನಿ ಸೀರೆಯಲ್ಲಿ ಮಿಂಚಿದರು. ಬಿಹಾರದ ಸಾಂಪ್ರದಾಯಿಕ ಕಲೆ ಮಧುಬನಿಯ ಚಿತ್ತಾರವಿರುವ ಬಿಳಿ ಬಣ್ಣದ, ಗೋಲ್ಡನ್ ಬಾರ್ಡರ್ ಸೀರೆ, ಕೆಂಪು ರವಿಕೆ ಧರಿಸಿ ಬಂದಿದ್ದ ಸಚಿವೆ ಅದರ ಜತೆ ಶಾಲು ಧರಿಸಿ ಗಮನ ಸೆಳೆದರು.
ಪ್ರತಿ ಸಲ ಬಜೆಟ್ ಮಂಡನೆ ದಿನ ವಿಭಿನ್ನ ಶೈಲಿ ಯ ಸಂಪ್ರದಾಯ ಸೀರೆ ಧರಿಸಿ ಬಂದು ನಿರ್ಮಲಾ ಗಮನ ಸೆಳೆಯುತ್ತಾರೆ. ಜೂನ್ನಲ್ಲಿ ಮಂಡಿಸಿದ ಮೋದಿ 3.0 ಸರ್ಕಾರದ ಮೊದಲ ಬಜೆಟ್ನಲ್ಲಿ ಮೈಸೂರು ಸಿಲ್ಕ್ ಸೀರೆ ತೊಟ್ಟು ಮಿಂಚಿದ್ದರು
ಸಚಿವೆಗೆ ಮೊಸರು ತಿನ್ನಿಸಿದ ರಾಷ್ಟ್ರಪತಿ ಮುರ್ಮು
ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆಗೆ ಸಂಸತ್ಗೆ ಆಗಮಿಸುವ ಮುನ್ನ ರಾಷ್ಟ್ರಪತಿ ಭವನಕ್ಕೆ ವಿತ್ತ ಇಲಾಖೆ ಅಧಿಕಾರಿಗಳ ಜೊತೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಸಂಪ್ರದಾಯದಂತೆ ರಾಷ್ಟ್ರಪತಿ ದೌಪದಿ ಮರ್ಮು ಅವರು ಸಚಿವೆಗೆ ಮೊಸರು ಮತ್ತು ಸಕ್ಕರೆ ತಿನ್ನಿಸಿ ಬಜೆಟ್ ಸಿಹಿಯಾಗಲಿ ಎಂದು ಶುಭ ಹಾರೈಸಿದರು. ಇದು ಅದೃಷ್ಟ ತರುತ್ತದೆ ಎನ್ನುವ ಪ್ರತೀತಿಯಿದೆ.