ನಮ್ಮ ಮನಸ್ಸಿನೊಳಗಿನ ಲೋಭ, ಮೋಹ, ಮದ, ಮತ್ಸರಗಳೆಂಬ ಕೊಚ್ಚೆಯನ್ನು ನಾವು ಸಂಪೂರ್ಣವಾಗಿ ಹೊರಹಾಕಿದಾಗಲೇ ನಮಗೆ ನಿಜವಾದ ಸುಖ, ಆನಂದ ಪ್ರಾಪ್ತವಾಗುವುದೆಂಬ ಮಾತಿನಲ್ಲಿ ಸಂದೇಹವಿಲ್ಲ ಕೃಷ್ಣನು ಅರ್ಜುನನಿಗೆ ಹೇಳುವಂತೆ ನಮ್ಮನ್ನು ಅನುಗಾಲವೂ ಕಾಡುವ ದುಃಖ ಮತ್ತು ಚಿಂತೆಗಳ ಉಗಮ ಸ್ಥಾನವೇ ಈ ಮೋಹರೂಪೀ ಕೊಚ್ಚೆ. ಧರ್ಮದ ಹಾದಿ ಯಾವುದೆಂದು ತಿಳಿದು ಕೂಡ ಅಧರ್ಮದ ಹಾದಿಯನ್ನು ಬಿಡಲಾಗದ ಮನೋಸ್ಥಿತಿಯನ್ನು ನಾವು ನಮ್ಮಲ್ಲೂ, ಅನೇಕರಲ್ಲೂ ಕಾಣುತ್ತೇವೆ. ಕುರುಕ್ಷೇತ್ರದಲ್ಲಿ ಕೌರವನ ಸೇನೆಯ ನಾಯಕತ್ವವನ್ನು ವಹಿಸಿದ ಭೀಷ್ಮಾಚಾರ್ಯರಲ್ಲಿಯೂ ಈ ದ್ವಂದ್ವವಿತ್ತು. ‘ದುರ್ಯೋಧನನ ಪರವಾಗಿ ಯುದ್ಧ ಮಾಡುವುದೆಂದರೆ ಅಧರ್ಮದ ಪರವಾಗಿ ಯುದ್ಧಮಾಡಿದಂತೆ; ಆದರೂ ನಾನು ಅಸಾಯಕ. ಆತನ ಅನ್ನದ ಋಣವನ್ನು ತೀರಿಸಲೇಬೇಕಾದ ಧರ್ಮ ಸಂಕಟ ನನ್ನದು’ ಎಂದು ಎಲ್ಲವನ್ನೂ ತಿಳಿದ ಪಿತಾಮಹಾ ಭೀಷ್ಮಾಚಾರ್ಯರು ಅರ್ಜುನನಲ್ಲಿ ಹೇಳುತ್ತಾರೆ. ಅಧರ್ಮದ ಹಾದಿಯನ್ನು ಬಿಟ್ಟು ಧರ್ಮದ ಹಾದಿಗೆ ಬರಲಾಗದೆ ಮೋಹದ ಬಲೆಯಲ್ಲಿ ಸಿಲುಕಿ ಸ್ವಜನಪಕ್ಷಪಾತ, ಭ್ರಷ್ಟಾಚಾರ ನಿರತರಾಗಿರುವ ಮಂದಿ ಇಂದು ಕೂಡ ಅದೆಷ್ಟಿಲ್ಲ! ಭ್ರಷ್ಟಾಚಾರ, ಲಂಚಾವತಾರ, ಸ್ವಜನಪಕ್ಷಪಾತಕ್ಕೆ ನಮ್ಮ ದೇಶಕ್ಕೆ ಇಂದು ವಿಶ್ವದಲ್ಲೇ ದೊಡ್ಡ ಸ್ಥಾನವಿದೆ. ಇದು ಯಾಕೆ ಹೀಗೆ ಎಂದು ಅಧ್ಯಯನ ನಡೆಸಿದಾಗ ತಿಳಿದು ಬಂದ ವಿಚಾರವೆಂದರೆ ನಮ್ಮ ದೇಶದಲ್ಲಿ ಕೌಟುಂಬಿಕ ವ್ಯವಸ್ಥೆ ಅತ್ಯಂತ ಭದ್ರವಾಗಿದ್ದು ಇದರಿಂದಾಗಿ ಸ್ವಜನ ವ್ಯಾಮೋಹವು ಆಳವಾಗಿ ಬೇರೂರಿದೆ; ಪರಿಣಾಮವಾಗಿ ಲಂಚಾವತಾರ, ಭ್ರಷ್ಟಾಚಾರ ಮೇರೆ ಮೀರಿದೆ ಎನ್ನುವುದು! ಕುಟುಂಬ ವ್ಯವಸ್ಥೆ ಭದ್ರವಾಗಿರುವುದರ ಪ್ರಯೋಜನ ಇರುವಾಗ ಅದರ ಜತಗೆ ಹಾನಿಯೂ ಇದೆ ಎನ್ನುವುದು ಗಮನಾರ್ಹ. ಹಾಗೆಂದು ನಮಗೆ ಪ್ರಯೋಜನ ಮಾತ್ರ ಬೇಕು, ಹಾನಿ ಬೇಡ ಎನ್ನಲಾದೀತೇ? ಅದೇನಿದ್ದರೂ ನಮ್ಮೊಳಗಿನ ಮೋಹರೂಪೀ ಕೊಚ್ಚೆ ನಮ್ಮ ಮತ್ತು ದೇವರ ನಡುವೆ ಸಕಲ ರೋಗಗಳ ದೊಡ್ಡ ಸಾಗರವನ್ನೆ ಸೃಷ್ಟಿಸಿ ನಮ್ಮನ್ನು ನಿರಂತರ ದುಃಖಕ್ಕೆ ಕೆಡವಿದೆ ಎನ್ನುವುದಂತೂ ಸತ್ಯ.