ನವದೆಹಲಿ: ಮಾರ್ಚ್ 1 ರಂದು ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಸಂಭವಿಸಿದ ಸ್ಫೋಟ ಪ್ರಕರಣದ ಶಂಕಿತ ಬಾಂಬರ್ ಬಗ್ಗೆ ಮಾಹಿತಿ ನೀಡಿದವರಿಗೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ ಐಎ) ಬುಧವಾರ 10 ಲಕ್ಷ ರು. ನಗದು ಬಹುಮಾನ ಘೋಷಿಸಿದೆ.
ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಇದನ್ನು ಪ್ರಕಟಿಸಿರುವ ಎನ್ ಐ ಎ ಕೆಫೆಗೆ ಪ್ರವೇಶಿಸುವಾಗ ಶಂಕಿತ ಬಾಂಬರ್ ಕ್ಯಾಪ್, ಮಾಸ್ಕ್ ಮತ್ತು ಕನ್ನಡಕವನ್ನು ಧರಿಸಿರುವ ಚಿತ್ರವನ್ನು ಪೋಸ್ಟ್ ಮಾಡಿದೆ. ಈತನ ಸುಳಿವು ಸಿಕ್ಕಲ್ಲಿ 080-295109006 8904241100 ಅಥವಾ ಇ-ಮೇಲ್ ವಿಳಾಸ info.blr.nia.@ gov.in ಗೆ ಸಂಪರ್ಕಿಸಿ ಎಂದು ತಿಳಿಸಲಾಗಿದೆ.
ಇದೇ ವೇಳೆ, ಮಾಹಿತಿದಾರರ ಗುರುತನ್ನು ಗೌಪ್ಯವಾಗಿಡಲಾಗುವುದು ಎಂದು ಎನ್‌ಐಎ ಭರವಸೆ ನೀಡಿದೆ. ಕೆಫೆಯಲ್ಲಿ ನಡೆದ ಸ್ಫೋಟದ ತನಿಖೆಯನ್ನು ಈ ವಾರದ ಆರಂಭದಲ್ಲಿ ಕರ್ನಾಟಕ ಪೊಲೀಸರಿಂದ ಎನ್‌ಐಎಗೆ ಹಸ್ತಾಂತರಿಸಲಾಗಿತ್ತು. ಮಾ.1ರಂದು ಪೂರ್ವ ಬೆಂಗಳೂರಿನ ವೈಟ್ ಫೀಲ್ಡ್ ಸನಿಹದ ಬ್ರೂಕ್ ಫೀಲ್ಡ್ ನಲ್ಲಿರುವ ರಾಮೇಶ್ವರಂ ಕೆಫೆಯಲ್ಲಿ ಸಂಭವಿಸಿದ್ದ ಸ್ಫೋಟದಲ್ಲಿ 10 ಜನರು ಗಾಯಗೊಂಡಿದ್ದರು ಕಫೆಗೆ ಬಂದ ವ್ಯಕ್ತಿಯೊಬ್ಬ ರವೆ ಇಡ್ಲಿ ಟೋಕನ್ ಪಡೆದು ಕೆಲ ಹೊತ್ತು ಅಲ್ಲಿ ಇದ್ದ. ಆದರೆ ಇಡ್ಲಿ ತಿನ್ನದೇ ಬಾಂಬ್ ಇಟ್ಟ ಬ್ಯಾಗ್ ಅನ್ನು ಕೆಫೆಯ ವಾಷ್ ಬೇಸಿನ್ ಬಳಿ ಇಟ್ಟು ಪರಾರಿ ಆಗಿದ್ದ. ಆತ ಅಲ್ಲಿಂದ ನಿರ್ಗಮಿಸಿದ ಕೆಲವು ನಿಮಿಷ ಬಳಿಕ ಸ್ಫೋಟ ಸಂಭವಿಸಿತ್ತು.