ಧಾರವಾಡ : ಧಾರವಾಡ ಲೋಕಸಭಾ ಚುನಾವಣೆಯಲ್ಲಿ ಭಾರೀ ಪ್ರಮಾಣದ ಹಣ ಹಂಚಿಕೆಯ ಆರೋಪಗಳು ಕೇಳಿ ಬರುತ್ತಿರುವ ನಡುವೆಯೇ ಧಾರವಾಡದಲ್ಲಿ ವಕೀಲರೊಬ್ಬರಿಗೆ ಸೇರಿದ ಫ್ಲ್ಯಾಟ್ ವೊಂದರಲ್ಲಿ ಕಂತೆ ಕಂತೆ ನೋಟುಗಳು ಸಿಕ್ಕಿರುವ ಘಟನೆ ಮಂಗಳವಾರ ನಗರದಲ್ಲಿ ರಾತ್ರಿ ನಡೆದಿದೆ. ಸುಮಾರು 20 ಕೋಟಿಗೂ ಅಧಿಕ ಹಣ ಪತ್ತೆಯಾಗಿದೆ ಎಂದು ಹೇಳಲಾಗುತ್ತಿದೆ. ಇದು ರಾಜ್ಯದಲ್ಲಿ ಚುನಾವಣೆ ಘೋಷಣೆಯಾದ ನಂತರ ವಶಕ್ಕೆ ಪಡೆದ ಅತಿದೊಡ್ಡ ಮೊತ್ತದ ಹಣವಾಗಿದೆ.ಧಾರವಾಡದ ದಾಸನಕೊಪ್ಪ ಸರ್ಕಲ್ ಬಳಿ ಇರುವ ಆರ್ಣಾ ರೆಸಿಡೆನ್ಸಿ ಅಪಾರ್ಟ್ ಮೆಂಟ್‌ನ ಮೂರನೇ ಮಹಡಿಯ ಫ್ಲ್ಯಾಟ್ ವೊಂದರಲ್ಲಿ ಮದ್ಯದ ದಾಳಿಗೆ ಹೋದ ಅಬಕಾರಿ ಅಧಿಕಾರಿಗಳಿಗೆ ಈ ಹಣ ಸಿಕ್ಕಿದೆ. ಖ್ಯಾತ ಗುತ್ತಿಗೆದಾರರೊಬ್ಬರ ಖಾತೆ ನಿರ್ವಹಿಸುತ್ತಿದ್ದಾರೆ ನ್ನಲಾದ ವಕೀಲರೂ ಆಗಿರುವ ಬಸವರಾಜ ದತ್ತೂನವರ್ ಎಂಬುವರಿಗೆ ಸೇರಿದ ಫ್ಲ್ಯಾಟ್ ಇದಾಗಿದೆ. ಫ್ಲ್ಯಾಟ್ನಲ್ಲಿ ಅಕ್ರಮವಾಗಿ ಮದ್ಯ ಸಂಗ್ರಹಿಸಿಡಲಾಗಿದೆ ಎಂಬ ಮಾಹಿತಿ ಮೇರೆಗೆ ಅಬಕಾರಿ ಇಲಾಖೆ ಅಧಿಕಾರಿಗಳು ರಾತ್ರಿ ದಾಳಿ ನಡೆಸಿದ್ದಾರೆ.