ಮನುಷ್ಯನಿಗೆ ತಾನು ನಂಬಿದ ದೈವ-ದೇವರುಗಳ ಬಗ್ಗೆ ಇರುವ ಪ್ರೀತಿಗೆ ಸಮನಾದುದು ಬೇರೆ ಯಾವುದೂ ಇಲ್ಲ. ನಮದಮ ದೇಶದಲ್ಲಿ ಸಿನಿಮಾ ಶುರುವಾದಾಗಿನಿಂದ ದೇವರುಗಳ ಬಗ್ಗೆ ಅವೆಷ್ಟು ಸಿನಿಮಾಗಳು ಬಂದವೋ ಎಣಿಕೆಗೆ ನಿಲುಕುವುದಿಲ್ಲ. ಹಿಂದೆ ಬಂದದ್ದೆಲ್ಲವೂ ಶಿಷ್ಟ ಶೈಲಿಯ ಪುರಾಣ-ಮಹಾಕಾವ್ಯಗಳ ಕಥೆಗಳನ್ನಾಧರಿಸಿದ ಸಿನಿಮಾಗಳು. ನಾಗಮಂಡಲದ ಕುರಿತಾಗಿ ಸಿನಿಮಾ ಮಾಡಿದ್ದಾರಾದರೂ ಅಲ್ಲಿ ಮೂಲತತ್ವಕ್ಕಿಂತ ಹೆಚ್ಚು ಸಾಮಾಜಿಕ ಕಥೆಯ ಮಸಾಲೆ ತುಂಬಿಸಿ ಬಿಟ್ಟಿದ್ದಾರೆ. ಇತ್ತೀಚೆಗೆ ‘ಕಾಂತಾರ’ದ ನಂತರ ಜನಪದರು ನಂಬಿದ ದೈವಗಳ ಕುರಿತಾಗಿ ಸಿನಿಮಾ ಮಾಡುವ ಟ್ರೆಂಡ್ ಆರಂಭವಾಗಿದೆ. ಇಂಥ ಸಿನಿಮಾಗಳನ್ನು ಮಾಡುವುದು ತುಂಬಾ ಕಷ್ಟ. ಯಾಕೆಂದರೆ ಇಲ್ಲಿ ಸಿದ್ಧ ಸಾಹಿತ್ಯವಿಲ್ಲ. ಇದಕ್ಕೆ ಸಂಬಂಧಿಸಿದ ಸಾಹಿತ್ಯಕ್ಕೋಸ್ಕರ ನಿರ್ದೇಶಕರು ಮತ್ತು ಚಿತ್ರಕಥೆ ಬರೆಯುವವರು ಸಾಕಷ್ಟು ಸಂಶೋಧನಾತ್ಮಕ ಕೆಲಸಗಳನ್ನು ಮಾಡಬೇಕಾಗುತ್ತದೆ. ಅದೂ ದೈವಗಳ ಪರಿಕಲ್ಪನೆ ಹುಟ್ಟಿಕೊಂಡದ್ದು ಪ್ರಾಚೀನ ಕಾಲದಲ್ಲಿ. ದಟ್ಟ ಕಾಡುಗಳ ನಡುವೆ ವಾಸಿಸುತ್ತಿದ್ದ ಜನಾಂಗಗಳ ನಡುವೆ. ಆದ್ದರಿಂದ ಸಿನಿಮಾಕ್ಕೆ ನೈಜ ಸ್ವರೂಪದ ಸೆಟ್ಟಿಂಗ್ಸ್ ಸಿದ್ಧಪಡಿಸುವುದು ಒಂದು ಹರಸಾಹಸ. ಈ ನಿಟ್ಟಿನಲ್ಲಿ ‘ಕಾಂತಾರ ಚಾಪ್ಟರ್ ೧’ ಒಂದು ಅಭೂತಪೂರ್ವ ಯಶಸ್ಸು ಸಾಧಿಸಿದ ಚಿತ್ರ.
ಆದರೆ ಈಗ ತೆರೆಯ ಮೇಲೆ ಬರಲು ಸಿದ್ಧವಾಗಿರುವ ತುಳುನಾಡಿನ ದೈವದ ಕುರಿತಾದ ಇನ್ನೊಂದು ಚಿತ್ರ ‘ಕೊರಗಜ್ಜ’ ಈ ಮೊದಲು ಬಂದ ಚಿತ್ರಗಳಿಗಿಂತ ಪೂರ್ತಿ ಭಿನ್ನವಾಗಿದೆ ಅನ್ನುವುದು ಮೊನ್ನೆ ಮೊನ್ನೆ ಭರ್ಜರಿ ವೈಭವದಿಂದ ತುಳುನಾಡಿನ ಚೆಂಡೆ ಹಾಗೂ ಉಡುಪಿಯ ಮಹಿಳಾ ಟೈಗರ್ ತಮಡದ ಕುಣಿತದೊಂದಿಗೆ ಬಿಡುಗಡೆಯಾದ ಅದರ first look & 3D poster ನಿಂದ ಸ್ಪಷ್ಟವಾಗಿ ವ್ಯಕ್ತವಾಗಿದೆ. ಇಲ್ಲಿ ಎತ್ತಿಕೊಂಡಿರುವ ಕಥಾವಸ್ತು ಪಂಜುರ್ಲಿ, ಕಲ್ಲುಕುಟ್ಟಿಗ, ಗುಳಿಗ ದೈವಗಳಂತೆ ಅತಿ ಮಾನುಷ ಶಕ್ತಿಯ ದೈವವಲ್ಲ.. ತ್ರಿವಿಕ್ರಮ್ ಸಪಲ್ಯ ನಿರ್ಮಾಪಕರಾಗಿ ಮತ್ತು ಸುಧೀರ ಅತ್ತಾವರ ನಿರ್ದೇಶನದಲ್ಲಿ ತ್ರಿವಿಕ್ರಮ್ ಸಿನೆಮಾಸ್ ಮತ್ತು ಸಕ್ಸೆಸ್ ಫಿಲ್ಮ್ಸ್ ಲಾಂಛನದಡಿಯಲ್ಲಿ ಅದ್ದೂರಿಯಾಗಿ ಸಿದ್ಧಗೊಂಡಿರುವ ಈ ಚಿತ್ರವು ತುಳುನಾಡಿನ ಸಕಲರೂ ನಂಬುವ ೮೦೦ ವರ್ಷಗಳ ಹಿಂದೆ ಮನುಷ್ಯನಾಗಿ ಕೊರಗ ಸಮಾಜದಲ್ಲಿ ಹುಟ್ಟಿ ಸತ್ಕಾರ್ಯಗಳನ್ನು ಮಾಡುತ್ತ ಬದುಕಿ ಅಲೌಕಿಕ ಶಕ್ತಿಯನ್ನು ತನ್ನದಾಗಿಸಿಕೊಂಡು ದೈವತ್ವಕ್ಕೇರಿದ ಕೊರಗಜ್ಜ ಎಂಬ ದೈವದ ಕುರಿತಾಗಿದೆ.
೮೦೦ ವರ್ಷಗಳಷ್ಟು ಹಳೆಯ ಕಥೆ. ಸಮಾಜದ ಮುಖ್ಯ ವಾಹಿನಿಯಿಂದ ಬಹುದೂರ ಉಳಿದ ಕೊರಗ ಸಮಾಜದ ಆಡು ಭಾಷೆ ತುಳುವಾದರೂ ಇತರರ ತುಳಿವಿಗಿಂತ ಪೂರ್ತಿ ಭಿನ್ನವಾದ, ಸುಲಭದಲ್ಲಿ ಅರ್ಥವಾಗದ ಒಂದು ಭಾಷೆ. ಸಾಂಸ್ಕೃತಿಕವಾಗಿ ಶ್ರಿಮಂತವಾದ ಒಂದು ವರ್ಗ ಅವರದ್ದು. ಕೊರಗಜ್ಜ ಐತಿಹಾಸಿಕ ವ್ಯಕ್ತಿಯಾದರೂ ದೈವತ್ವಕ್ಕೇರಿ ಜನರಿಂದ ಆರಾಧಿಸಲ್ಪಟ್ಟ ನಂತರ ಅತನ ಜೀವನ ಚರಿತ್ರೆಗೆ ಸಂಬಂಧಿಸಿ ನೂರಾರು ರೆಕ್ಕೆಪುಕ್ಕಗಳು ಹುಟ್ಟಿಕೊಂಡಿರಬಹುದು. ಅವೆಲ್ಲವನ್ನೂ ಕೂಲಂಕುಷವಾಗಿ ಅಧ್ಯಯನ ಮಾಡಿ ಜನರಿಂದ ಸಂಗ್ರಗಿಸಿ ಒಂದು ಚಿತ್ರಕಥೆ ಬರೆದಿದ್ದಾರೆ ಸುಧೀರ ಅತ್ತಾವರ ಅವರು. ಜನರು ಕರುಣಾಳುವೆಂದು ಕೊಂಡಾಡುವ ಕೊರಗಜ್ಜನ ಕುರಿತು ಚಿತ್ರ ಮಾಡುವುದು ಒಂದು ಮಹಾ ಪುಣ್ಯದ ಕೆಲಸವೆಂದು ದೃಡವಾಗಿ ನಂಬಿ ಮೂರು ವರ್ಷಗಳಿಂದ ಸತತವಾಗಿ ಹಗಲಿರುಳೆನ್ನದೆ ದುಡಿಯುತ್ತಿದ್ದಾರೆ. ಮುಂಬಯಿನ ಎಂಜಿನಿಯರ್ ವಿದ್ಯಾಧರ್ ಶೆಟ್ಟಿಯವರು ಇವರ ಹೆಗಲಿಗೆ ಹೆಗಲು ಕೊಟ್ಟು ಸಹಕರಿಸುತ್ತಿದ್ದಾರೆ. ಈಗ ಭಾರತದ ಆರು ಭಾಷೆಗಳಲ್ಲಿ (ತುಳು, ಕನ್ನಡ, ತಮಿಳು, ಮಲೆಯಾಳ, ತೆಲುಗು ಮತ್ತು ಹಿಂದಿ) ಚಿತ್ರವು ಸಿದ್ಧವಾಗಿ Pan-India ಚಿತ್ರವಾಗಿ ನವೆಂಬರ್ ತಿಂಗಳ ಕೊನೆಗೆ ತೆರೆ ಕಾಣಲಿದೆ.
ಸುಧೀರ ಅತ್ತಾವರ್ ಈ ಹಿಂದೆ ತಮ್ಮ ಚಿತ್ರ ಸಂಗೀತ ರಚನೆಗೆ ರಾಷ್ಟ್ರಪ್ರಶಸ್ತಿ ಪಡೆದವರು. ‘ಕೊರಗಜ್ಜ’ ಚಿತ್ರಕ್ಕೆ ಅವರು ಬರೆದ ಹಾಡುಗಳಿಗೆ ಭಾರತದ ಪ್ರಸಿದ್ಧ ಸಂಗೀತ ಸಂಯೋಜಕರಾದ ಗೋಪಿ ಸುಂದರ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಪ್ರಸಿದ್ಧ ಹಿನ್ನೆಲೆ ಗಾಯಕರಾದ ಹರಿಹರನ್ ಮತ್ತು ಚಿತ್ರಾ ಮತ್ತು ಬಾಲಿವುಡ್ ತಾರೆ ಶಾರೂನ್ ಪ್ರಭಾಕರ್ ಹಾಡುಗಳಿಗೆ ಕಂಠದಾನ ಮಾಡಿದ್ದಾರೆ. ಬಾಲಿವುಡ್ ನ ಪ್ರಸಿದ್ಧ ಚಿತ್ರನಟ ಕಬೀರ್ ಬೇಡಿ, ಕನ್ನಡದ ತಾರಾ ಮತ್ತು ಶ್ರುತಿ ತಾರಾಗಣದಲ್ಲಿದ್ದಾರೆ.
ಚಿತ್ರನಿರ್ಮಾಣದ ಹಂತದಲ್ಲಿಯೇ ತಂಡವು ನೂರಾರು ಅಡೆತಡೆಗಳನ್ನು ಎದುರಿಸಿತ್ತು. ತುಳುನಾಡಿನ ಸ್ಥಳೀಯರೇ ದೈವದ ಕುರಿತಾಗಿ ಚಿತ್ರ ತೆಗೆಯುವುದರ ವಿರುದ್ಧ ತಮ್ಮ ತೀವ್ರ ವಿರೋಧ ವ್ಯಕ್ತ ಪಡಿಸಿದ್ದರು. ಆದರೆ ನಿರ್ಮಾಪಕರಾಗಲಿ ನಿರ್ದೇಶಕರಾಗಲಿ ಇದರಿಂದ ಸ್ವಲ್ಪವೂ ಹಿಂಜರಿಯದೆ ದೈರ್ಯದಿಂದ ಮುನ್ನುಗ್ಗಿ ಕೆಲಸ ಮಾಡಿ ಚಿತ್ರದ ನಿರ್ಮಾಣವನ್ನು ಯಶಸ್ವಿಯಾಗಿ ಮುಗಿಸಿದ್ದಾರೆ. ಚಿತ್ರದ first look & 3D posterನ್ನು ನೋಡಿದವರು ಇದೊಂದು ಕೊರಗಜ್ಜನ ಭಕ್ತರಿಗೆ ದೈವಿ ಅನುಭವ ನೀಡುವ ಮತ್ತು ರೋಮಾಂಚನಗೊಳಿಸುವ ಅದ್ಭುತ ಚಿತ್ರವಾಗಿ ಹೊರಹೊಮ್ಮಿ ಭರ್ಜರಿ ಯಶಸ್ಸು ಪಡೆಯುತ್ತದೆ ಎಂಬ ಭರವಸೆಯನ್ನಿತ್ತಿದ್ದಾರೆ. ಮುಂದೆನಾಗುತ್ತದೋ ಕಾದು ನೋಡಬೇಕು.
ಡಾ.ಪಾರ್ವತಿ ಜಿ.ಐತಾಳ್

