ಉಡುಪಿ : ಅಲೆವೂರು ಗ್ರಾಮದ ಪಡುಅಲೆವೂರು ಎಂಬಲ್ಲಿ ಗಂಭೀರ ಸ್ಥಿತಿಯಲ್ಲಿದ್ದ ತೆಂಗಿನಕಾಯಿ ಕೀಳುವ ಕಾರ್ಮಿಕನನ್ನು ಸಮಾಜಸೇವಕ ನಿತ್ಯಾನಂದ ಒಳಕಾಡುವರು ರಕ್ಷಿಸಿರುವ ಘಟನೆ ನಡೆದಿದೆ.ರಸ್ತೆ ಸನಿಹ ಗಾಯಾಳಾಗಿ ನರಳಾಡುತ್ತ ಅಸಹಾಯಕ ಸ್ಥಿತಿಯಲ್ಲಿ ಬಿದ್ದುಕೊಂಡಿರುವ ಬಗ್ಗೆ ಸಾರ್ವಜನಿಕರಿಂದ ಮಾಹಿತಿ ಪಡೆದ ಒಳಕಾಡುವರು ತಕ್ಷಣ ಸ್ಥಳಕ್ಕೆ ಬಂದು, ಅಂಬುಲೆನ್ಸ್ ವಾಹನದಲ್ಲಿ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ಸಾಗಿಸಿ ಪ್ರಾಥಮಿಕ ಚಿಕಿತ್ಸೆಗೆ ಒಳಪಡಿಸಿದರು. ಬಳಿಕ ಗಾಯಾಳುವಿಗೆ ತುರ್ತಾಗಿ ತಜ್ಞವೈದ್ಯರಿಂದ ಚಿಕಿತ್ಸೆ ಅಗತ್ಯವಿದ್ದರಿಂದ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ಸಾಗಿಸಲಾಯಿತು.
ಗಾಯಾಳುವನ್ನು ಪಡುಅಲೆವೂರಿನ ಸುರೇಶ ಸೇರಿಗಾರ (63) ಎಂದು ಗುರುತಿಸಲಾಗಿದೆ. ಗಾಯಾಳು ವ್ಯಕ್ತಿ ಎಲ್ಲೋ ತೋಟದಲ್ಲಿ ತೆಂಗಿನ ಕಾಯಿ ಕೀಳುತ್ತಿದ್ದಾಗ ಬಿದ್ದಿರಬೇಕು. ತೋಟದ ಮಾಲಿಕ ಭೀತಿಗೊಳಗಾಗಿ ಗಾಯಾಳುವನ್ನು ಸ್ಥಳಾಂತರಿಸಿರ ಬಹುದೆನ್ನುವ ಶಂಕೆಯನ್ನು ಸಾರ್ವಜನಿಕರು ವ್ಯಕ್ತಪಡಿಸಿದ್ದಾರೆ. ಗಾಯಾಳು ಬಿದ್ದಿರುವ ಸ್ಥಳದಲ್ಲಿ ತೆಂಗಿನ ಮರಗಳಿಲ್ಲದಿರುವುದು ಕಂಡುಬಂದಿದೆ.

