ಕುಂದಾಪುರ : ಕುಂದಾಪುರ ಭಂಡಾರ್ಕಾರ್ಸ್ ಕಾಲೇಜು, ಕುಂದಾಪುರ ಪುರಸಭೆ ಹಾಗೂ ಸ್ಥಳೀಯ ಸಂಘ ಸಂಸ್ಥೆಗಳು, ಸೇವಾ ಸಂಸ್ಥೆಗಳ ಸಹಕಾರದಿಂದ ಈ ವರ್ಷ ಮಹಾತ್ಮ ಗಾಂಧಿಯವರ ಜನ್ಮದಿನಾಚರಣೆ ದಿನ ಅಕ್ಟೋಬರ್ 2 ರಂದು, ಅರ್ಥಪೂರ್ಣ ಸಮಾಜಮುಖಿ ಕಾರ್ಯಕ್ರಮ “ಸ್ವಚ್ಛ ಕುಂದಾಪುರ-ನಮ್ಮ ಕುಂದಾಪುರ” ಅಭಿಯಾನ ನಡೆಸಲು ನಿರ್ಧರಿಸಿದೆ. ಕಾಲೇಜಿನ ವಿದ್ಯಾರ್ಥಿಗಳು, ಬೋಧಕ ಮತ್ತು ಬೋಧಕೇತರ ವರ್ಗದವರು ಬೃಹತ್ “ಸ್ವಚ್ಛ ಕುಂದಾಪುರ-ನಮ್ಮ ಕುಂದಾಪುರ” ಎಂಬ ಜನ ಜಾಗೃತಿ ಕಾರ್ಯಕ್ರಮವನ್ನು ಸ್ಥಳೀಯ ಕುಂದಾಪುರದ 23 ವಾರ್ಡ್‍ಗಳಲ್ಲಿ ಹಮ್ಮಿಕೊಂಡಿದ್ದಾರೆ. ಜನರಲ್ಲಿ ಸ್ವಚ್ಛತೆ ಕುರಿತು ಅರಿವು ಮೂಡಿಸುವ ಜನ ಜಾಗೃತಿ ಕಾರ್ಯಕ್ರಮ ಇದಾಗಿದ್ದು, ಕುಂದಾಪುರ ಪುರಸಭಾ ವ್ಯಾಪ್ತಿಯ ಸುಮಾರು 15000 ಕ್ಕೂ ಮಿಕ್ಕಿ ಮನೆಗಳ ಸಂಪರ್ಕ ಮಾಡುವುದು ಮತ್ತು ಜನರಲ್ಲಿ ಪರಿಸರದ ಸ್ವಚ್ಛತೆಯ ಕುರಿತು ಜಾಗೃತಿ ಮೂಡಿಸುವುದು ಈ ಅಭಿಯಾನದ ಮುಖ್ಯ ಉದ್ದೇಶವಾಗಿದೆ.
ಈ ಜಾಗೃತಿ ಅಭಿಯಾನದ ಮುಖ್ಯ ಉದ್ದೇಶ ಕುಂದಾಪುರ ಪುರಸಭೆಯ ವ್ಯಾಪ್ತಿಯಲ್ಲಿ ಉತ್ತಮ ಆರೋಗ್ಯಕ್ಕಾಗಿ ಹಸಿ ಮತ್ತು ಒಣ ತ್ಯಾಜ್ಯಗಳ ವಿಲೇವಾರಿ, ಪ್ಲಾಸ್ಟಿಕ್ ಮುಕ್ತ ಸ್ವಚ್ಛ ಪರಿಸರ ಮತ್ತು ಜಲಸಂರಕ್ಷಣೆಯಾಗಿದೆ. ಸುಸ್ಥಿರ ಬದುಕಿಗೆ ನಮಗೆ ಮತ್ತು ನಮ್ಮ ಮುಂದಿನ ಪೀಳಿಗೆಗೆ ಅತ್ಯಗತ್ಯವಾಗಿರುವ ಉತ್ತಮ ಪರಿಸರವನ್ನು ಉಳಿಸುವ ಕುರಿತು ಜನ ಜಾಗೃತಿ ಹಾಗೂ ಪರಿಸರ ಮಾಲಿನ್ಯವನ್ನು ತಡೆಯುವುದರ ಕುರಿತು ವಿದ್ಯಾರ್ಥಿಗಳು ವಿವರಿಸಲಿದ್ದಾರೆ.ಕುಂದಾಪುರದ ಸಹಾಯಕ ಆಯುಕ್ತರು, ಪುರಸಭಾ ಮುಖ್ಯಾಧಿಕಾರಿಗಳು, ಹಿರಿಯ ಅಧಿಕಾರಿಗಳು ಹಾಗೂ ಎಲ್ಲಾ ಪುರಸಭಾ ಸದಸ್ಯರು ಈ “ಸ್ವಚ್ಛ ಕುಂದಾಪುರ-ನಮ್ಮಕುಂದಾಪುರ” ಅಭಿಯಾನಕ್ಕೆ ಉತ್ತಮ ಬೆಂಬಲ ನೀಡುವ ಭರವಸೆ ನೀಡಿದ್ದಾರೆ.
ಈಗಾಗಲೇ ಕುಂದಾಪುರ ಪುರಸಭೆ ಪುರ ಸ್ವಚ್ಛತೆ ಕುರಿತು ಉತ್ತಮವಾದ ಸೇವೆ ಸಲ್ಲಿಸುತ್ತಿದ್ದು, ರಾಜ್ಯ, ರಾಷ್ಟ್ರಮಟ್ಟದ ಪ್ರಶಸ್ತಿಯನ್ನು ಪಡೆದಿದೆ. ಈ ಪ್ರತಿಷ್ಠೆಯನ್ನು ಉಳಿಸಿಕೊಳ್ಳುವುದರೊಂದಿಗೆ ಮುಂದಿನ ಪೀಳಿಗೆಗೂ ಪರಿಸರ ಸ್ವಚ್ಛತೆ ಕುರಿತು ಅರಿವು ಮೂಡಿಸುವುದು ಹಾಗೂ ಕುಂದಾಪುರವನ್ನು ಮಾದರಿ ನಗರವಾಗಿ ಬೆಳೆಸುವುದು ಭಂಡಾರ್ಕಾರ್ಸ್ ಕಾಲೇಜಿನ ಈ ಅಭಿಯಾನದ ಉದ್ದೇಶವಾಗಿದೆ.
60 ಸಂವತ್ಸರವನ್ನು ಪೂರೈಸಿ 61ನೇ ವರ್ಷದಲ್ಲಿ ಮುನ್ನಡೆಯುತ್ತಿರುವ ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜು ಸುಮಾರು 3000 ವಿದ್ಯಾರ್ಥಿಗಳಿಗೆ ಈ ಜಾಗೃತಿ ಮೂಲಕ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೂ ಅನುವು ಮಾಡಿ ಕೊಡುತ್ತಿದೆ. ಕಾಲೇಜು ಈ ಹಿಂದೆಯೂ ಇಂತಹ ಸಮಾಜಮುಖಿ ಕಾರ್ಯಕ್ರಮವನ್ನು ಮಾಡಿ ಅದನ್ನು ಯಶಸ್ವಿಯಾಗಿ ಪೂರ್ಣಗೊಳಿಸಿತ್ತು. ಅಲ್ಲದೇ ಇಂತಹ ಕಾರ್ಯಕ್ರಮವನ್ನು ನಿರಂತರವಾಗಿ ಮಾಡಿಕೊಂಡು ಬಂದಿದೆ