ಉಡುಪಿ : ಬಿಜೆಪಿ ಕೇಂದ್ರ ಸಮಿತಿಯ ನಿರ್ಣಯದಂತೆ, ರಾಜ್ಯಾದ್ಯಂತ ವ್ಯವಸ್ಥಿತ ಕಾರ್ಯಾಲಯವನ್ನು ಸಜ್ಜುಗೊಳಿಸಿ, ವ್ಯಾಪಕ ಜನಸಂಪರ್ಕದೊಂದಿಗೆ ಸದೃಢ ಪಕ್ಷ ಸಂಘಟನೆಗೆ ಒತ್ತು ನೀಡುವ ಕಾರ್ಯ ಚಟುವಟಿಕೆಗೆ ಚಾಲನೆ ನೀಡಲಾಗುತ್ತಿದೆ ಎಂದು ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಹಾಗೂ ಬಿಜೆಪಿ ಕಾರ್ಯಾಲಯ ನಿರ್ವಹಣಾ ರಾಜ್ಯ ಸಮಿತಿ ಸದಸ್ಯ ಕೆ.ಉದಯ ಕುಮಾರ್ ಶೆಟ್ಟಿ ಹೇಳಿದರು.
ಅವರು ಬಿಜೆಪಿ ಕೊಡಗು ಜಿಲ್ಲಾಧ್ಯಕ್ಷ ರಾಬಿನ್ ದೇವಯ್ಯ ಅಧ್ಯಕ್ಷತೆಯಲ್ಲಿ ಕೊಡಗು ಜಿಲ್ಲಾ ಕಛೇರಿಯಲ್ಲಿ ನಡೆದ ಬಿಜೆಪಿ ಜಿಲ್ಲಾ ಕಾರ್ಯಾಲಯ ವ್ಯವಸ್ಥೆ ಸಮಿತಿ ಸಭೆಯ ನೇತೃತ್ವ ವಹಿಸಿ ಮಾತನಾಡಿದರು.
ಮಾದರಿ ಕಾರ್ಯಾಲಯ ಹೇಗಿರಬೇಕು, ಏನೆಲ್ಲಾ ಹೆಚ್ಚುವರಿ ವ್ಯವಸ್ಥೆಗಳನ್ನು ಅಳವಡಿಸಿಕೊಳ್ಳಬೇಕು ಎಂಬುದನ್ನು ರಾಜ್ಯದ ಮಾರ್ಗಸೂಚಿಯಂತೆ ಅನುಷ್ಠಾನಗೊಳಿಸಿ ಪರಿಪೂರ್ಣ ಜಿಲ್ಲಾ ಕಾರ್ಯಾಲಯದ ಮೂಲಕ ಪಕ್ಷದ ಕಾರ್ಯ ವಿಸ್ತಾರವನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಲು ಸಂಘಟಿತ ಪ್ರಯತ್ನದೊಂದಿಗೆ ತೊಡಗಿಸಿಕೊಳ್ಳಬೇಕು ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಮಂಗಳೂರು ವಿಭಾಗ ಸಂಘಟನಾ ಪ್ರಧಾನ ಕಾರ್ಯದರ್ಶಿ ಪ್ರಸಾದ್ ಕುಮಾರ್, ಕೊಡಗು ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ರವಿ ಕಾಳಪ್ಪ, ಮಾದಪ್ಪ, ಜಿಲ್ಲಾ ಕಾರ್ಯಾಲಯ ವ್ಯವಸ್ಥೆ ಸಮಿತಿ ಸದಸ್ಯರು ಉಪಸ್ಥಿತರಿದ್ದರು.