ಬೈಂದೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿರುವ ರಾಜ್ಯ ಬಜೆಟ್‌ನಲ್ಲಿ ಕರಾವಳಿ ಜಿಲ್ಲೆಗಳ ನಿರ್ಲಕ್ಷ್ಯ ಹಾಗೂ ರಾಜ್ಯ ಸರ್ಕಾರದ ಮಲತಾಯಿ ಧೋರಣೆ ವಿರೋಧಿಸಿ ಬಿಜೆಪಿ ಬೈಂದೂರು ಮಂಡಲದ ವತಿಯಿಂದ ಶಾಸಕರಾದ ಗುರುರಾಜ್ ಶೆಟ್ಟಿ ಗಂಟಿಹೊಳೆ ಅವರ ನೇತೃತ್ವದಲ್ಲಿ ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲ ಗ್ರಾಮ ಪಂಚಾಯತ್ ಕಚೇರಿಗಳ ಎದುರುಗಡೆ ಗುರುವಾರ ಪ್ರತಿಭಟನೆ ನಡೆಸಿ, ಪಿಡಿಒ ಅವರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಶಾಸಕರಾದ ಗುರುರಾಜ ಶೆಟ್ಟಿ ಗಂಟಿಹೊಳೆ ಹಾಗೂ ಮಂಡಲ ಅಧ್ಯಕ್ಷರಾದ ಅನಿತಾ ಆರ್.ಕೆ ಅವರು ಮುಂದಾಳತ್ವದಲ್ಲಿ ಎಲ್ಲ ಗ್ರಾಮ ಪಂಚಾಯತಿ ಕಚೇರಿ ಮುಂಭಾಗದಲ್ಲಿ ಗುರುವಾರ ಬೆಳಗ್ಗೆಯಿಂದಲೇ ಬಿಜೆಪಿ ಕಾರ್ಯಕರ್ತರು, ಪ್ರಮುಖರು, ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯತಿ ಸದಸ್ಯರು ಜಮಾಯಿಸಿ ಪ್ರತಿಭಟನೆ ನಡೆಸಿ, ರಾಜ್ಯ ಸರ್ಕಾರದ ಮಲತಾಯಿ ಧೋರಣೆಯನ್ನು ಖಂಡಿಸಿ ಆಕ್ರೋಶ ಹೊರ ಹಾಕಿದರು.
ಅಭಿವೃದ್ಧಿಯನ್ನು ಶೂನ್ಯಕ್ಕೆ ಇಳಿಸಿದ ರಾಜ್ಯ ಸರಕಾರದ ಆಡಳಿತ ಪ್ರಸ್ತುತ ದುಸ್ಥಿತಿಗೆ ಬಂದು ತಲುಪಿದೆ.

ಜನರ ಕನಿಷ್ಠ ಅಭಿವೃದ್ಧಿ ಬೇಡಿಕೆ, ಗ್ರಾಮದ ಕನಿಷ್ಠ ಮೂಲ ಭೂತ ಸಮಸ್ಯೆಗಳು ಈಡೇರದೆ ಜನಾಕ್ರೋಶ ಸ್ಫೋಟಗೊಳ್ಳುವ ಮುನ್ನ ಸರಕಾರ ಎಚ್ಚೆತ್ತು ಕೊಳ್ಳಬೇಕಿದೆ. ರಾಜ್ಯ ಸರಕಾರದ ಜನ ವಿರೋಧಿ ನೀತಿ ಹಾಗೂ ಬಜೆಟ್ ನಲ್ಲಿ ಕರಾವಳಿ ಅಭಿವೃದ್ಧಿ ವಿಚಾರಗಳಿಗೆ ಒತ್ತು ನೀಡದೇ ಇರುವುದನ್ನು ಖಂಡಿಸಿ ಪ್ರತಿಭಟನೆ ನಡೆಸಲಾಯಿತು.
ಅಭಿವೃದ್ಧಿ ವಿರೋಧ ಸರಕಾರ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಶಾಸಕರಾದ ಗುರುರಾಜ್ ಶೆಟ್ಟಿ ಗಂಟಿಹೊಳೆ, ರಾಜ್ಯ ಸರಕಾರ ಅಭಿವೃದ್ಧಿಯನ್ನು ಸಂಪೂರ್ಣ ಮರೆತಿದೆ. ಬಜೆಟ್‌ನಲ್ಲಿ ಕರಾವಳಿ ಜಿಲ್ಲೆಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ರಾಜ್ಯ ಸರಕಾರದ ಜನ ವಿರೋಧಿ ಧೋರಣೆ ಖಂಡಿಸಿ ಬಿಜೆಪಿ ಬೈಂದೂರು ಮಂಡಲದ ವತಿಯಿಂದ ಗ್ರಾಮೀಣ ಭಾಗದ ರೈತರು ಜನ ಸಾಮಾನ್ಯರ ರಸ್ತೆ ಅಭಿವೃದ್ಧಿ ಬೇಡಿಕೆ, 9/11 ಖಾತೆ, ವಸತಿ ಯೋಜನೆಯಡಿ ಮನೆ ಸೌಲಭ್ಯ ರೇಷನ್ ಕಾರ್ಡ್, ವಿವಿಧ ನೀರಾವರಿ ಸೌಲಭ್ಯಗಳು, ಕೃಷಿ ಹಾಗೂ ತೋಟಗಾರಿಕೆ ಸೌಲಭ್ಯ ಸೇರಿದಂತೆ ಇನ್ನಿತರ ಇಲಾಖೆಗಳಿಂದ ಜನ ಸಾಮಾನ್ಯರಿಗೆ ಸೌಲಭ್ಯಗಳು ಸಿಗದೇ ಅವವುದನ್ನು ಮುಖ್ಯವಾಗಿಟ್ಟುಕೊಂಡು ಪ್ರತಿಭಟನೆ ನಡೆಸಲಾಗಿದೆ ಎಂದರು.
ರಾಜ್ಯ ಸರಕಾರ ಮಂಡಿಸಿದ ಬಜೆಟ್ ನಲ್ಲಿ ಕರಾವಳಿ ಭಾಗಕ್ಕೆ ಯಾವುದೇ ಅಭಿವೃದ್ಧಿ ಯೋಜನೆಗಳನ್ನು ಘೋಷಿಸದ ಜನ ವಿರೋಧಿ ನೀತಿಯ ವಿರುದ್ದ ಕ್ಷೇತ್ರದ ಪ್ರತಿ ಪಂಚಾಯತ್ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಮುಂಭಾಗದಲ್ಲಿ ಪ್ರತಿಭಟನೆ ನಡೆದಿದೆ. ಪ್ರಸ್ತುತ ಗ್ರಾಮದ ಜನರು ತಮ್ಮ ಸಮಸ್ಯೆಗಳನ್ನು, ಅಹವಾಲುಗಳನ್ನು ಹೇಳಿಕೊಳ್ಳಲು ಆಗದೇ ಕಂಗಾಲಾಗಿದ್ದಾರೆ ಎಂದರು.

ಕ್ಷೇತ್ರದ ಶಾಸಕನಾಗಿ ಜನರ ಕಷ್ಟಗಳಿಗೆ ಶಕ್ತಿ ಮೀರಿ ಸ್ಪಂದಿಸಿದರೂ, ತ್ರಿ ಸ್ತರದ ಪಂಚಾಯತ್ ರಾಜ್ ವ್ಯವಸ್ಥೆಯ ಯಾವ ಹಂತಕ್ಕೂ ಪ್ರತಿನಿಧಿಗಳೂ ಇಲ್ಲದೇ ಚುನಾವಣೆಗಳನ್ನೂ ಮುಂದೂಡುವುದರೊಂದಿಗೆ ಗ್ರಾಮೀಣ ಜನರರಿಗೆ ಸರಕಾರ ದ್ರೋಹವೆಸಗುತ್ತಿದೆ.ಯಾವುದೇ ಸರಕಾರ ಬಂದರೂ ಅಭಿವೃದ್ಧಿ ಅನ್ನುವುದು ನಿಧಾನ ಗತಿ ಪಡೆದು ಕೊಳ್ಳಬಹುದು ಆದರೆ ಸಂಪೂರ್ಣ ನಿಂತ ಉದಾಹರಣೆ ಇಲ್ಲ.
ಪ್ರಸ್ತುತ ರಾಜ್ಯ ಸರಕಾರದಲ್ಲಿ ಅಭಿವೃದ್ಧಿ ಶೂನ್ಯ ಹಂತಕ್ಕೆ ಇಳಿದು ಆಡಳಿತ ದುಸ್ಥಿತಿಗೆ ಬಂದು ತಲುಪಿದೆ. ಬರಿ ಜನರ ಖಾತೆಗೆ ಹಣ ಜಮೆ ಮಾಡುವುದು ಒಂದೇ ಸರಕಾರದ ಕಾಳಜಿ ಆಗದೇ ಜನ ಸಾಮಾನ್ಯರ ದುಃಖ ದುಮ್ಮಾನ ಗಳಿಗೆ, ಗ್ರಾಮೀಣ ಭಾಗದ ಕನಿಷ್ಠ ಅಭಿವೃದ್ಧಿ ಬೇಡಿಕೆಗಳಿಗೆ ತನ್ನ ವಿವಿಧ ಇಲಾಖೆಗಳ ಮೂಲಕ ಸ್ಪಂದಿಸುವಂತಾಗಬೇಕು.ಪೂರಕವಾಗಿ ಜಿಲ್ಲೆಗೆ ಈ ಬಜೆಟ್ ನಲ್ಲಿ ಯಾವುದೇ ಅಭಿವೃದ್ಧಿ ಯೋಜನೆ ನೀಡಿಲ್ಲ.ಇಂತಹ ಪರಿಸ್ಥಿಯ ಹೊರತಾಗಿ ಜನರ ಕನಿಷ್ಠ ಅಭಿವೃದ್ಧಿ ಬೇಡಿಕೆ ಗ್ರಾಮದ ಕನಿಷ್ಠ ಮೂಲ ಭೂತ ಸಮಸ್ಯೆಗಳು ಈಡೇರದೆ ಜನಾಕ್ರೋಶ ಸ್ಫೋಟ ಗೊಳ್ಳುವ ಮುನ್ನ ಸರಕಾರ ಎಚ್ಚೆತ್ತು ಕೊಳ್ಳಬೇಕು ಎಂದರು.


ಬೈಂದೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಬೈಂದೂರು ಹಾಗೂ ಕುಂದಾಪುರ ತಾಲೂಕಿನ 39 ಗ್ರಾಮ ಪಂಚಾಯತ್ ಹಾಗೂ ಬೈಂದೂರು ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಏಕ ಕಾಲದಲ್ಲಿ ಪ್ರತಿಭಟನೆಯನ್ನು ಹಮ್ಮಿ ಕೊಂಡು ರಾಜ್ಯ ಸರಕಾರದ ಜನ ವಿರೋಧಿ ನೀತಿಗಳ ವಿರುದ್ದ ಆಕ್ರೋಶ ಹೊರ ಹಾಕಲಾಯಿತು ಹಾಗೂ ದಿನ ನಿತ್ಯ ಜನ ಸಾಮಾನ್ಯರು ಅನುಭವಿಸುತ್ತಿರುವ ವಿವಿಧ ಸಮಸ್ಯೆಗಳ ನಿವಾರಣೆ ಹಾಗೂ ಅಭಿವೃದ್ದಿ ಬೇಡಿಕೆಗಳಿಗೆ ಹಕ್ಕೋತ್ತಾಯ ಮಂಡಿಸಿ ಗ್ರಾಮ ಪಂಚಾಯತ್ ಆಡಳಿತಾಧಿಕಾರಿಗಳ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.


