ಬೈಂದೂರು : ಶಾಸಕರಾದ ಶ್ರೀ ಗುರುರಾಜ್ ಶೆಟ್ಟಿ ಗಂಟಿಹೊಳೆ ರವರು ಬೈಂದೂರು ವಿಧಾನಸಭಾ ಕ್ಷೇತ್ರದ ಪ್ರಮುಖರೊಂದಿಗೆ ಬೆಂಗಳೂರಿನಲ್ಲಿ ಮಾನ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಶ್ರೀ ಪ್ರಿಯಾಂಕ್ ಖರ್ಗೆ ರವರನ್ನು ಹಾಗೂ ಮಾನ್ಯ ಪೌರಾಡಳಿತ ಸಚಿವರಾದ ಶ್ರೀ ರಹೀಮ್ ಖಾನ್ ರವರನ್ನು ಮತ್ತು ಪೌರಾಡಳಿತ ಇಲಾಖೆಯ ಕಾರ್ಯದರ್ಶಿಗಳಾದ ಶ್ರೀಮತಿ ದೀಪ .ಎಂ ಚೋಳನ್ ರವರನ್ನು ಖುದ್ದಾಗಿ ಭೇಟಿ ಮಾಡಿ ಅವರುಗಳೊಂದಿಗೆ ಸರಣಿ ಸಭೆ ಗಳನ್ನು ನಡೆಸಿ ಬೈಂದೂರು ಪಟ್ಟಣ ಪಂಚಾಯತ್ ಗೆ ಸಂಬಂಧಿಸಿದಂತೆ ಗ್ರಾಮೀಣ ರೈತರಿಗೆ ಪಟ್ಟಣ ಪಂಚಾಯತ್ ನ ನಿಯಮಗಳಿಂದ ಆಗುತ್ತಿರುವ ಸಂಕಷ್ಟಗಳ ಕುರಿತು ಮನವರಿಕೆ ಮಾಡಿದರು ಹಾಗೂ ಗ್ರಾಮೀಣ ಭಾಗದ ಜನರಿಗೆ ಅನುಕೂಲವಾಗುವ ಕ್ರಮಗಳನ್ನು ಕೈಗೊಳ್ಳುವಂತೆ ಹಾಗೂ ಪ್ರಸ್ತುತ ಇರುವ ಬೈಂದೂರು ಪಟ್ಟಣ ಪಂಚಾಯತ್ ನ ಗ್ರಾಮೀಣ ಭಾಗವನ್ನು ಕೈ ಬಿಟ್ಟು ಹೊಸದಾಗಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯನ್ನು ಮರುವಿಂಗಡಣೆ ಮಾಡಿ, ಬಫರ್ ಜೋನ್ ಮಿತಿಯನ್ನು ಕೈಬಿಟ್ಟು, ಆ ಪ್ರದೇಶದಲ್ಲಿ ಗ್ರಾಮ ಪಂಚಾಯತ್ ಗಳಿಗೆ ಅನ್ವಯಿಸುವ ನಿಯಮಗಳನ್ನು ಅಳವಡಿಸುವ ಮೂಲಕ ಅಕ್ರಮ ಸಕ್ರಮ,94 ಸಿ ಮತ್ತು ಕುಮ್ಕಿ ಹಾಗೂ ವಸತಿ ಯೋಜನೆ ಸೇರಿದಂತೆ ಇತರೆ ಎಲ್ಲಾ ಸರಕಾರಿ ಯೋಜನೆಗಳ ಹಕ್ಕು ಗಳನ್ನು ರೈತರಿಗೆ ನೀಡುವ ಮುಖೇನ ಗ್ರಾಮೀಣ ಬಡ ಜನರ ಹಿತ ಕಾಪಾಡಲು ಕ್ರಮ ವಹಿಸುವ ಬಗ್ಗೆ ಪತ್ರದ ಮುಖೇನ ಮನವಿ ಮಾಡಿದರು.
ಮುಂದುವರಿದು ಪಟ್ಟಣ ಪಟ್ಟಣ ಪಂಚಾಯತ್ ನಿಂದ ಪ್ರಸ್ತುತ ಜನರಿಗೆ ಆಗುತ್ತಿರುವ ಜ್ವಲಂತ ಸಮಸ್ಯೆಗಳ ಬಗ್ಗೆ ಮೂಲ ಸೌಕರ್ಯ ಕೊರತೆಗಳ ಬಗ್ಗೆ ಮೌಖಿಕವಾಗಿ ಮಾನ್ಯ ಸಚಿವರುಗಳು ಹಾಗೂ ಪೌರಾಡಳಿತ ಇಲಾಖೆಯ ಕಾರ್ಯದರ್ಶಿಗಳ ಗಮನಕ್ಕೆ ತರುವ ಮೂಲಕ ವಿಸ್ತೃತವಾಗಿ ಚರ್ಚಿಸುವ ಮೂಲಕ, ಈ ಕುರಿತು ಆದ್ಯತೆ ಮೇರೆಗೆ ಕ್ರಮ ವಹಿಸುವಂತೆ ಕೋರಿದರು.
ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಮಾನ್ಯ ಸಚಿವದ್ವಯರು ಹಾಗೂ ಕಾರ್ಯದರ್ಶಿಗಳು ಅತಿ ಶೀಘ್ರದಲ್ಲಿ ಈ ಬಗ್ಗೆ ಆದ್ಯತೆ ಮೇರೆಗೆ ನಿಯಮಾನುಸಾರ ಕ್ರಮವಹಿಸಿ ರಾಜ್ಯ ಸರ್ಕಾರದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳುವ ಭರವಸೆಯನ್ನು ನೀಡಿರುತ್ತಾರೆ.

