ಬೆಂಗಳೂರು : ಬಿಜೆಪಿಯವರು ಸಂವಿಧಾನ ಬದಲಾವಣೆ ಮಾಡುವ ಒಳಸಂಚು ರೂಪಿಸಿದ್ದಾರೆ. ಬಿಜೆಪಿಯವರಿಗೆ ದೇಶ ಹಾ ಗೂ ಬಡವರ ಏಳಿಗೆಗಿಂತ ಸಂವಿಧಾನ ಬದಲಿಸಲು ಬಹುಮತ ಬೇಕಾಗಿದೆ. ಒಂದು ವೇಳೆ ಸಂವಿಧಾನ ಬದಲಾವಣೆ ಮಾಡಿದರೆ ದೇಶದಲ್ಲಿ ರಕ್ತಪಾತ ಆಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂವಿಧಾನ ಬದಲಾವಣೆ ಮಾಡುವುದು ಬಿಜೆಪಿಯ ಹಿಡನ್ ಅಜೆಂಡಾ. ಹೀಗಾಗಿ ನರೇಂದ್ರ ಮೋದಿ ಅವರು ತಮ್ಮ ಯೋಜನೆಯನ್ನು ಅನಂತಕುಮಾರ್ ಹೆಗಡೆ ಮೂಲಕ ಹೇಳಿಸುತ್ತಿದ್ದಾರೆ ಎಂದೂ ಅವರು ದೂರಿದರು. ಸಂವಿಧಾನ ಬದಲಿಸಲು 400 ಕ್ಕೂ ಹೆಚ್ಚು ಸ್ಥಾನ ನೀಡುವಂತೆ ಸಂಸದ ಅನಂತಕುಮಾರ್ ಹೆಗಡೆ ನೀಡಿರುವ ಹೇಳಿಕೆಗೆ ಮುಖ್ಯಮಂತ್ರಿ ಈ ಪ್ರತಿಕ್ರಿಯೆ ನೀಡಿದರು.