ಉಡುಪಿ : ನಾನು ಉಡುಪಿ ಚಿಕ್ಕಮಗಳೂರು ಬಿಟ್ಟು ಬೇರೆ ಲೋಕಸಭಾ ಕ್ಷೇತ್ರಕ್ಕೆ ಹೋಗುವ ಪ್ರಶ್ನೆಯೇ ಇಲ್ಲ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮತ್ತೆ ಸ್ಪಷ್ಟಪಡಿಸಿದ್ದಾರೆ. ಉಡುಪಿಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಬೇರೆ ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತೇನೆ ‘ ಎಂದು ಎಂದು ಐದಾರು ಕ್ಷೇತ್ರಗಳ ಹೆಸರು ಕೇಳಿ ಬರುತ್ತಿವೆ. ಆದರೆ ನಾನು ಉಡುಪಿ ಚಿಕ್ಕಮಗಳೂರಿನಿಂದಲೇ ಸ್ಪರ್ಧಿಸುತ್ತೇನೆ. ನಾನು ಈ ಜಿಲ್ಲೆಯವಳೂ ಅಲ್ಲ, ನಾನು ಯಾರೂ ಅಂತಾನೇ ಗೊತ್ತಿಲ್ಲದಿದ್ದಾಗಲೂ ಈ ಕ್ಷೇತ್ರದ ಜನತೆ ನನ್ನನ್ನು ಗೆಲ್ಲಿಸಿ ಮಂತ್ರಿಯಾಗುವಂತೆ ಮಾಡಿದ್ದಾರೆ. ಆದ್ದರಿಂದ ನಾನು ಬೇರೆ ಕ್ಷೇತ್ರಕ್ಕೆ ಹೋಗುವ ಪ್ರಶ್ನೆಯೇ ಇಲ್ಲ. ಈ ಕ್ಷೇತ್ರದಲ್ಲಿ ನಾನು ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ, ಅವುಗಳ ಆಧಾರದಲ್ಲಿಯೇ ನಾನು ಮತ ಕೇಳುತ್ತೇನೆ ಎಂದರು. ಆದರೆ ಪಕ್ಷ ಹೇಳಿದರೆ, ಬೇರೆ ಕ್ಷೇತ್ರಕ್ಕೆ ಹೋಗುವಂತೆ ಸೂಚನೆ ನೀಡಿದರೆ ಅದಕ್ಕೂ ನಾನು ಬದ್ಧಳಿದ್ದೇನೆ ಎಂದವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.