ಕರಾವಳಿ : ಕರ್ನಾಟಕದ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಹೊಸ ಕ್ರಾಂತಿಯನ್ನುoಟುಮಾಡಿರುವ ಪ್ರತಿಷ್ಠಿತ ನಿಟ್ಟೆ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಹಾಗೂ ಕೆ.ಎಸ್. ಹೆಗ್ಡೆ ಚಾರಿಟೇಬಲ್ ಹಾಸ್ಪಿಟಲ್ ನ ವ್ಯವಸ್ಥಾಪಕ ನಿರ್ದೇಶಕ ನಿಟ್ಟೆ ವಿನಯ್ ಹೆಗ್ಡೆ ನಿಧನಕ್ಕೆ ಉಡುಪಿ ಜಿಲ್ಲಾ ಬಿಜೆಪಿ ತೀವ್ರ ಸಂತಾಪ ವ್ಯಕ್ತಪಡಿಸಿದೆ.
ದೂರದರ್ಶಿತ್ವದ ಉದಾತ್ತ ಚಿಂತನೆಯೊಂದಿಗೆ ನಿಟ್ಟೆ ಸಮೂಹ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಬೆಳೆಸಿ, ರಾಜ್ಯಾದ್ಯoತ 44 ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವ ಜೊತೆಗೆ ದೇರಳಕಟ್ಟೆಯಲ್ಲಿ ಕೆ.ಎಸ್. ಹೆಗ್ಡೆ ಆಸ್ಪತ್ರೆಯನ್ನು ಪ್ರಾರಂಭಿಸಿ ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ವೈದ್ಯಕೀಯ ಸೇವೆಯನ್ನು ನೀಡುವ ಮೂಲಕ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಬಹು ದೊಡ್ಡ ಕೊಡುಗೆ ನೀಡಿರುವ ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಕುಲಾಧಿಪತಿ ಎನ್.ವಿನಯ್ ಹೆಗ್ಡೆ ಅವರ ನಿಧನ ಸಮಾಜಕ್ಕೆ ತುಂಬಲಾರದ ನಷ್ಟವೆನಿಸಿದೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ತಿಳಿಸಿದ್ದಾರೆ.
ಅಗಲಿದ ಅವರ ದಿವ್ಯಾತ್ಮಕ್ಕೆ ಭಗವಂತನು ಚಿರ ಶಾಂತಿಯನ್ನು ಕರುಣಿಸಲಿ ಹಾಗೂ ಕುಟುಂಬಕ್ಕೆ ಅವರ ಆಗಲುವಿಕೆಯ ದುಃಖವನ್ನು ಸಹಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುವುದಾಗಿ ಕುತ್ಯಾರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

