ಮೂಡುಬಿದಿರೆ: ವಾಲ್ಪಾಡಿ ಗ್ರಾಮದ ಉಡೆಜಾಲು ಎಂಬಲ್ಲಿನ ಮುತ್ತಯ್ಯ ಎಂಬವರ ಮನೆಯ ಮುಂಭಾಗದ ಗುಡ್ಡದಲ್ಲಿ ಕೆಲವು ವ್ಯಕ್ತಿಗಳು ಸೇರಿ, ಎರಡು ಅಂಕದ ಕೋಳಿಗಳಿಗೆ ಮಾರಕವಾದ ಬಾಳುಗಳನ್ನು ಕಟ್ಟಿ, ಹಿಂಸಾತ್ಮಕವಾಗಿ ಕಾದಾಡಲು ತಯಾರಾಗಿದ್ದರು ಮತ್ತು ಹಣವನ್ನು ಪಣವಾಗಿಟ್ಟು ಕೋಳಿ ಅಂಕ ನಡೆಸುತ್ತಿದ್ದರು .
ಮೂಡುಬಿದಿರೆ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ ಸಂದೇಶ್ ಪಿ. ಜಿ. ಅವರು ರೌಂಡ್ಸ್ ಕರ್ತವ್ಯದಲ್ಲಿದ್ದಾಗ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ್ದಾರೆ.ಪೊಲೀಸರನ್ನು ನೋಡಿದ ಕೂಡಲೇ ಕೋಳಿ ಅಂಕದ ಜೂಜಾಟಗಾರರು ಓಡಿ ಪರಾರಿಯಾಗಲು ಯತ್ನಿಸಿದರು.
ಪೊಲೀಸರು ತಕ್ಷಣವೇ 10 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.ಬಂಧಿತ ಆರೋಪಿಗಳಾದ ಅಜಯ್, ಸಂಗಮ್, ಸಂದೇಶ್, ನಿತೇಶ್ ಶೆಟ್ಟಿ, ಅರುಣ್ ಬಿ.ಎಸ್., ಕೃಷ್ಣಪ್ಪ ಪೂಜಾರಿ, ರವಿ ಕುಲಾಲ್, ಯಾದವ್, ದಿನೇಶ್, ಸದಾಶಿವ ಎಂದು ಗುರುತಿಸಲಾಗಿದೆ.ಈ ಸಂದರ್ಭ ಸ್ಥಳದಿಂದ ತಪ್ಪಿಸಿಕೊಂಡು ಹೋದ ಸಂಪತ್, ಸುನಿಲ್ ಹಾಗೂ ಇತರರ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ.
ಕೋಳಿ ಅಂಕದ ಜೂಜಾಟಕ್ಕೆ ಪಣವಾಗಿ ಬಳಸಲು ಉದ್ದೇಶಿಸಿದ್ದ 6 ಹುಂಜಗಳು ಮತ್ತು ರೂ. 4,500 ನಗದನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ದಸ್ತಗಿರಿಯಾದ ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ

