ಬೆಂಗಳೂರು : ಯಾವುದೇ ಕಾರಣಕ್ಕೂ ತಾವು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗುವುದಿಲ್ಲ ಎಂದು ಸ್ಪಷ್ಟಪ ಡಿಸಿರುವ ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಸಂಸದ ಡಿ.ವಿ.ಸದಾನಂದಗೌಡ ಅವರು, ನನ್ನ ಮುಂದಿನ ನಡಿಗೆ ಬಿಜೆಪಿ ಶುದ್ದೀಕರಣಗೊಳಿಸುವತ್ತ ಎಂದು ಘೋಷಿಸಿದ್ದಾರೆ.” ಗುರುವಾರ ತಮ್ಮ ನಿವಾಸದಲ್ಲಿ ಪತ್ರಿಕಾ ಗೋಷ್ಠಿ ಉದ್ದೇಶಿಸಿ ಮಾತನಾಡುವ ಮೂಲಕ ಸದಾನಂದಗೌಡರು ಕಳೆದ ಮೂರು ದಿನಗಳಿಂದ ಕೇಳಿ ಬರುತ್ತಿದ್ದ ವದಂತಿ ಮತ್ತು ಕುತೂಹಲಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದರು
ಕಾಂಗ್ರೆಸ್ ಪಕ್ಷದಿಂದ ನನಗೆ ಆಹ್ವಾನ ಬಂದಿದ್ದು ನಿಜ. ನೀವು ಯಾವುದಾದರೂ ಕ್ಷೇತ್ರ ಆಯ್ಕೆ ಮಾಡಿಕೊಳ್ಳಿ ಎಂಬ ಸಲಹೆಯನ್ನೂ ನೀಡಿದರು. ಜತೆಗೆ ಗೆಲ್ಲಿಸಿಕೊಂಡು ಬರುತೇವೆ ಎಂಬ ಭರವಸೆಯನ್ನೂ ಕೊಟ್ಟರು. ಆದರೆ, ನಾನು ಬಿಜೆಪಿ ಬಿಟ್ಟು ಬೇರೆ ಯಾವುದೇ ಪಕ್ಷಕ್ಕೂ ವಲಸೆ ಹೋಗುವ ಉದ್ದೇಶವಿಲ್ಲ ಎಂದರು.