ಉಡುಪಿ : ಹುಚ್ಚು ನಾಯಿಯೊಂದು ಓಡಾಡುತ್ತಾ ಸುಮಾರು ಎಂಟು ಮಂದಿಗೆ ಕಚ್ಚಿದ ಆತಂಕಕಾರಿ ಘಟನೆ ಶನಿವಾರ ಉಡುಪಿ ನಗರದಲ್ಲಿ ನಡೆದಿದೆ. ತೀರಾ ಬಡಕಲಾಗಿ ರೋಗ ಪೀಡಿತವಾಗಿದ್ದ ಈ ನಾಯಿಯು ಶನಿವಾರ ದಿನವಿಡೀ ನಗರದ ಚಿತ್ತರಂಜನ್ ವೃತ್ತ, ಮಸೀದಿ ರಸ್ತೆ, ಮಾರುತಿ ವಿಥಿಕಾ, ಸಿಟಿ ಬಸ್ ನಿಲ್ದಾಣ, ಸಂಸ್ಕೃತ ಕಾಲೇಜು ರಸ್ತೆಗಳಲ್ಲಿ ಓಡಾಡಿದೆ. ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದವರ ಮೇಲೆರಗಿದೆ. ಮೂರು ಮಂದಿಯ ಕಾಲಿನ ಮೀನ ಖಂಡದ ಮಾಂಸವನ್ನೇ ಕಚ್ಚಿ ತೆಗೆದಿದೆ. ಇತರ 5 ಮಂದಿಗೆ ತೀವ್ರವಾಗಿ ಗಾಯಗೊಳಿಸಿದ್ದು, ಅವರೆಲ್ಲರೂ ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಇನ್ನು ಖಾಸಗಿ ಆಸ್ಪತ್ರೆಗಳಲ್ಲೂ ಕೆಲವರು ಚಿಕಿತ್ಸೆ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ.