ಬೆಂಗಳೂರು : ಬಳ್ಳಾರಿ ನಗರದಲ್ಲಿ ಪೂರ್ವಯೋಜಿತ ಸಂಚಿನಂತೆ ಪರಿಚಿತನ ಭೇಟಿ ಸಾಧ್ಯವಾಗದೆ `ರಾಮೇಶ್ವರ ಕೆಫೆ ಬಾಂಬ್ ಸ್ಪೋಟ ಪ್ರಕರಣದ ಶಂಕಿತ ವ್ಯಕ್ತಿ ಬೇರೆಡೆ ತಪ್ಪಿಸಿಕೊಂಡಿರಬಹುದು ಎಂಬ ಅನುಮಾನವನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.
ಶಂಕಿತ ವ್ಯಕ್ತಿಯನ್ನು ಬೆನ್ನತ್ತಿರುವ ರಾಷ್ಟ್ರೀಯ ತನಿಖಾ ದಳ (ಎನ್ಐಎ) ಹಾಗೂ ಸಿಸಿಬಿ ಪೊಲೀಸರು, ಬಳ್ಳಾರಿ ಸೇರಿದಂತೆ ಇತರೆಡೆ ತೀವ್ರ ತಪಾಸಣೆ ನಡೆಸಿದ್ದಾರೆ. ಆದರೆ ಬಳ್ಳಾರಿ ನಂತರ ಶಂಕಿತನ ಪ್ರಯಾಣದ ವಿವರ ಸಿಗದೆ ತನಿಖಾ ಸಂಸ್ಥೆಗಳಿಗೆ ಸವಾಲಾಗಿ ಪರಿಣಮಿಸಿದೆ. ಇನ್ನು ಬಳ್ಳಾರಿ ಬಸ್ ನಿಲ್ದಾಣದ ಸಿಸಿ ಟಿವಿ ಕ್ಯಾಮರಾದಲ್ಲಿನ ದೃಶ್ಯಾವಳಿ ಆಧರಿಸಿ ಶಂಕಿತನ ಕುರಿತು ಮಾಹಿತಿ ನೀಡುವಂತೆ ಸಾರ್ವಜನಿಕರಲ್ಲಿ ಎನ್ಐಎ ಮನವಿ ಮಾಡಿಕೊಂಡಿದೆ