ಬೆಳ್ತಂಗಡಿ : ತಾಲೂಕಿನ ಬಹು ಚರ್ಚಿತ ಬೆಳ್ತಂಗಡಿಯ ಶ್ರೀರಾಮ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ 2023-24 ರ ಸಾಲಿನ ಲೆಕ್ಕ ಪರಿಶೋಧನೆಯಲ್ಲಿ ಸುಮಾರು 40 ಕೋಟಿ ರೂ. ಹಗರಣದ ಹಿನ್ನಲೆಯಲ್ಲಿ ಸಹಕಾರಿ ಸಂಘದ ಉಪನಿಬಂಧಕರು 15 ಮಂದಿ ವಿರುದ್ಧ ಸುಮೋಟೋ ಪ್ರಕರಣ ದಾಖಲಿಸಿ ತನಿಖೆ ನಡೆಸಿದ್ದು ಅವ್ಯವಹಾರ ನಡೆದಿರುವುದು ದೃಢ ಪಟ್ಟಿದೆ. ಆದ್ದರಿಂದ ಸೊಸೈಟಿಯ ಜವಾಬ್ದಾರಿ ವಹಿಸಿದ್ದ 10 ಮಂದಿಯ ಆಸ್ತಿಯನ್ನು ಮುಟ್ಟುಗೋಲು ಹಾಕಲು ಜೂ. 5 ರಂದು ಮಂಗಳೂರು ಸಹಕಾರ ಸಂಘಗಳ ಉಪನಿಬಂಧಕರ ನ್ಯಾಯಾಲಯದಿಂದ 10 ಮಂದಿಗೆ ನೋಟಿಸ್ ಜಾರಿ ಮಾಡಲಾಗಿದೆ.
ಅಧ್ಯಕ್ಷ ಸಿ.ಎಚ್.ಪ್ರಭಾಕರ, ನಿರ್ದೇಶಕರಾದ ವಿಶ್ವನಾಥ ಆರ್.ನಾಯಕ್, ವಿಶ್ವನಾಥ, ಪ್ರಮೋದ್ ಆರ್.ನಾಯಕ್, ಕಿಶೋರ್ ಲಾಯಿಲ, ಪಿ. ಜಗನ್ನಾಥ್, ರತ್ನಾಕರ ಶೇರಿಗಾರ್, ನಯನಾ ಶಿವಪ್ರಸಾದ್, ಸಿಇಒ ಚಂದ್ರಕಾಂತ್, ಸಿಬಂದಿ ಸರಿತಾ ಅವರಿಗೆ ಜೂ. 5 ರಂದು ನೋಟೀಸ್ ಜಾರಿಯಾಗಿದೆ. ಆಸ್ತಿ ಜಪ್ತಿ ಆದೇಶವನ್ನು ತೆರವುಗೊಳಿಸಲು ಬಯಸಿದಲ್ಲಿ ಜೂ. 20 ರೊಳಗೆ 30,45,24,278 ರೂ.ಗಳನ್ನು ನಗದು ಭದ್ರತೆಯಾಗಿ ಉಪನಿಬಂಧಕರ ನ್ಯಾಯಾಲಯದ ಪಿ.ಡಿ.ಖಾತೆಯಲ್ಲಿ ಠೇವಣಿ ಇರಿಸಬೇಕು ಎಂದು ನೋಟೀಸ್ ನಲ್ಲಿ ಸೂಚಿಸಲಾಗಿದೆ.

