ಉಡುಪಿ : ಶ್ರೀಮನ್ಮಧ್ವಸಿದ್ಧಾಂತ ಪ್ರಬೋಧಕ ಸಂಸ್ಕೃತ ಸಂಶೋಧನ ಕೇಂದ್ರದಿಂದ ಸಂಪಾದಿತವಾದ ಜ್ಯೋತಿಷ್ಯ ವಿಶ್ವಕೋಶದ ಪರಿಶೋಧನ ಕಾರ್ಯಾಗಾರವನ್ನು ಪರ್ಯಾಯ ಶ್ರೀಪುತ್ತಿಗೆ ಮಠಾಧೀಶರಾದ ಶ್ರೀಶ್ರೀಶ್ರೀಸುಗುಣೇಂದ್ರತೀರ್ಥ ಶ್ರೀಪಾದರು ಮತ್ತು ಶ್ಶ್ರೀ ಶ್ರೀ ಸುಶ್ರೀಂದ್ರತೀರ್ಥಶ್ರೀಪಾದರು ಶ್ರೀಕೃಷ್ಣಮಠದ ಗೀತಾಮಂದಿರದಲ್ಲಿ ನಡೆದ ಸರಳ ಸಮಾರಂಭದಲ್ಲಿ ಉದ್ಘಾಟಿಸಿದರು.
ವೇದಾಂತ ಶಾಸ್ತ್ರ ಮತ್ತು ಜ್ಯೋತಿಷ್ಯ ಶಾಸ್ತ್ರಗಳು ಪರಸ್ಪರ ಪೂರಕವಾದ ಶಾಸ್ತ್ರಗಳು. ಉಡುಪಿಯು ವೇದಾಂತ ಶಾಸ್ತ್ರದ ಉಗಮಸ್ಥಾನ. ಇಲ್ಲಿಜ್ಯೋತಿಷ್ಯ ವಿಶ್ವಕೋಶವು ನಿರ್ಮಿತವಾದದ್ದು ಉಡುಪಿಗೇ ಒಂದು ಹೆಮ್ಮೆಯ ವಿಷಯ. ಶಾಸ್ತ್ರದ ಅಧ್ಯಯನಕ್ಕೆ ಕೋಶಗಳ ಸಹಾಯ ತುಂಬಾ ಮುಖ್ಯವಾಗುತ್ತದೆ. ವಾಚಸ್ಪತ್ಯ, ಶಬ್ದಕಲ್ಪದ್ರುಮ ಮೊದಲಾದ ಕೋಶಗಳಂತೆ ಜ್ಯೋತಿಷ್ಯ ವಿಶ್ವಕೋಶವೂ ಕೂಡಾ ಒಂದು ಅಪೂರ್ವವಾದ ಮತ್ತು ಆದರ್ಶವಾದ ಗ್ರಂಥ.
ಒಂದು ಗ್ರಂಥ ಮೇರು ಕೃತಿಯಾಗಬೇಕಾದರೆ ಅದರಲ್ಲಿ ಯಾವುದೇ ದೋಷಗಳೂ ಇರಬಾರದು. ಈ ನಿಟ್ಟಿನಲ್ಲಿ ಜ್ಯೋತಿಷ ವಿಶ್ವಕೋಶವು ಪುಸ್ತಕರೂಪದಲ್ಲಿ ಪ್ರಕಾಶನಗೊಳ್ಳುವುದಕ್ಕೂ ಮೊದಲು ದೋಷಗಳ ಆವಿಷ್ಕಾರ ಮತ್ತು ಪರಿಷ್ಕಾರ ತುಂಬಾ ಮುಖ್ಯವಾಗುತ್ತದೆ. ಏಳುದಿನಗಳ ಕಾರ್ಯಾಗಾರದಲ್ಲಿ ಗ್ರಂಥವು ನಿರ್ದುಷ್ಟವಾಗಿ ಮೂಡಿಬರಲಿ. ತಮ್ಮ ಪರ್ಯಾಯಾವಧಿಯಲ್ಲೇ ಲೋಕಾರ್ಪಣೆಗೊಳ್ಳುವಂತಾಗಲಿ ಎಂದು ಆಶೀರ್ವದಿಸಿದರು .
ಶ್ರೀ ಸುಶ್ರೀಂದ್ರತೀರ್ಥಶ್ರೀಪಾದರು ಪರಿಶೋಧನಕಾರ್ಯಾಗಾರ ನಿರಾತಂಕವಾಗಿ ನಡೆದು ಯಶಸ್ವಿಯಾಗಲಿ ಎಂದು ಹಾರೈಸಿದರು.
ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ ಶೃಂಗೇರಿಪರಿಸರದ ನಿರ್ದೇಶಕರಾದ ಪ್ರೊ. ಹಂಸಧರ ಝಾ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಜ್ಯೋತಿಷಶಾಸ್ತ್ರದ ವ್ಯಾಪ್ತಿ ಮತ್ತು ವಿಶ್ವಕೋಶದ ಆವಶ್ಯಕತೆಯನ್ನು ವಿವರಿಸಿದರು.
ಶ್ರೀಮನ್ಮಧ್ವಸಿದ್ಧಾಂತಪ್ರಬೋಧಕಸಂಸ್ಕೃತಕಾಲೇಜಿನಲ್ಲಿ ನಡೆಯುವ ಈ ಕಾರ್ಯಾಗಾರವು ಎಳು ದಿನಗಳಕಾಲ ನಡೆಯಲಿದ್ದು, ಜ್ಯೋತಿಷ ವಿಶ್ವಕೋಶದ ಪ್ರಧಾನ ಸಂಪಾದಕರಾದ ಪ್ರೊ. ಸಾಲಿಗ್ರಾಮಶ್ರೀನಿವಾಸ ಅಡಿಗರು ವೇದಿಕೆಯಲ್ಲಿ ಉಪಸ್ಥಿತರಿದ್ದು, ಜ್ಯೋತಿಷ್ಯಕ್ಕೆ ಎರಡು ಮುಖಗಳಿದ್ದು ಅದರಲ್ಲಿ ಒಂದು ಫಲಿತ ಭಾಗ ಸಮಾಜಕ್ಕೆ ಅತಿಪರಿಚಿತ ಮತ್ತು ಜನಮಾನಸಕ್ಕೆ ಅತ್ಯಂತ ಆದರಣೀಯವಾಗಿ ಕಂಡಿದೆ. ಆದರೆ ಈ ಫಲಿತಭಾಗ ಇಷ್ಟೊಂದು ರುಚಿಸುವಂತೆ ಕರಾರುವಾಕ್ಕಾಗಿ ಇರಲು ಕಾರಣ ಜ್ಯೋತಿಷದ ಗಣಿತಭಾಗ.
ಇದನ್ನು ಅಧ್ಯಯನ ಮಾಡುವವರ ಮತ್ತು ಅಧ್ಯಾಪನ ಮಾಡುವವರ ಸಂಖ್ಯೆ ತೀರಾ ವಿರಳ. ಆದರೂ ಉಡುಪಿ ಸಂಸ್ಕೃತ ಕಾಲೇಜಿನಲ್ಲಿ ವ್ಯವಸ್ಥಿತ ರೀತಿಯಲ್ಲಿ ಗಾಢವಾಗಿ ಅಧ್ಯಯನ ಅಧ್ಯಾಪನಗಳು ನಡೆಯುತ್ತಿವೆ ಎಂದು ಸಂತೋಷ ವ್ಯಕ್ತ ಪಡಿಸಿದರು.
ಉಡುಪಿಯ ಸಂಸ್ಕೃತಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಸತ್ಯನಾರಾಯಣ ವಿ ರಾವ್ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದು ಶ್ರೀಪಾದರುಗಳನ್ನು ಮತ್ತು ಅತಿಥಿಗಳನ್ನು ಸ್ವಾಗತಿಸಿದರು. ಎಸ್.ಎಮ್.ಎಸ್.ಪಿ. ಸಭಾದ ಕೋಶಾಧಿಕಾರಿಗಳಾದ ಶ್ರೀಯುತ ಚಂದ್ರಶೇಖರ ಆಚಾರ್ಯರು ಶ್ರೀಗಳಿಗೆ ಫಲಹಾರಗಳನ್ನು ಸಮರ್ಪಿಸಿದರು. ಏಳುದಿನಗಳ ಕಾರ್ಯಾಗಾರದ ಪ್ರಧಾನ ಸಂಯೋಜಕರಾದ ಡಾ. ರಾಮಕೃಷ್ಣ ಪೆಜತ್ತಾಯ ಇವರು ಕಾರ್ಯಕ್ರಮವನ್ನು ನಿರೂಪಿಸಿದರು. ಪರಿಶೋಧನಮಾರ್ಗದರ್ಶಕರಲ್ಲೋರ್ವರಾದ ಪ್ರೊ. ಶಿವಪ್ರಸಾದತಂತ್ರೀ ಇವರು ಧನ್ಯವಾದಸಮರ್ಪಿಸಿದರು.
ಸಂಸ್ಕೃತಕಾಲೇಜಿನ ವಿದ್ಯಾರ್ಥಿಗಳಾದ ಸೀತಾರಾಮ ಬನ್ನಿಂತಾಯ, ವಿಷ್ಣುಪಾದ ಮತ್ತು ಮುಕುಂದ ಕೊಡಂಕಿರಿ ವೇದಘೋಷಗೈದರು. ಉಜಿರೆಯ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಸಂಸ್ಕೃತ ಪ್ರಾಧ್ಯಾಪಕರಾದ ಪ್ರೊ. ಶ್ರೀಧ್ ಭಟ್ ಉಪಸ್ಥಿತರಿದ್ದರು.
ದೆಹಲಿಯ ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ ಆರ್ಥಿಕ ಸಹಯೋಗದಲ್ಲಿ ನಡೆಯುವ ಈ ಕಾರ್ಯಾಗಾರದಲ್ಲಿ ತಿರುಪತಿಯ ರಾಷ್ಟ್ರಿಯ ವಿದ್ಯಾಪೀಠದ ವಿಶ್ರಾಂತ ಜ್ಯೋತಿಷ ಪ್ರಾಧ್ಯಾಪಕರಾದ ಶ್ರಿಪಾದ ಭಟ್ಟರು. ಸಂಸ್ಕೃತಕಾಲೇಜಿನ ವಿಶ್ರಾಂತ ಪ್ರಾಂಶುಪಾಲರಾದ ಪ್ರೊ. ಹರಿದಾಸ ಭಟ್ಟರು, ವೇದಸಂಸ್ಕೃತ ಅಕಾಡೆಮಿ, ಕುಮಟ ಇದರ ನಿರ್ದೇಶಕರಾದ ಗೋಪಾಲಕೃಷ್ಣ ಹೆಗಡೆ, ಪ್ರೋ. ಶಿವಪ್ರಸಾದ ತಂತ್ರಿ, ಡಾ. ನಾಗೇಶ ಭಟ್ಟ ಕೆ.ಸಿ. ಸೇರಿದಂತೆ ಎಂಟು ಮಂದಿ ಮಾರ್ಗದರ್ಶಕರು ಮತ್ತು ಪ್ರೋ. ವಿಜಯಾನಂದ ಅಡಿಗ ಹತ್ತು ಮಂದಿ ಪರಿಶೋಧಕರು ಭಾಗವಹಿಸುತ್ತಿದ್ದಾರೆ