ಕೋಟ : ಕಾಲೇಜು ವಿದ್ಯಾರ್ಥಿಗಳಿಗೆ ಕೃಷಿ ಕುರಿತು ಆಸಕ್ತಿ ಮೂಡಿಸುವ ಸಲುವಾಗಿ ಗೀತಾನಂದ ಫೌಂಡೇಶನ್ ಮಣೂರು-ಪಡುಕರೆ, ಸ.ಪ.ಪೂ. ಕಾಲೇಜು ಮಣೂರು-ಪಡುಕರೆ ಸಂಯುಕ್ತ ಆಶ್ರಯದಲ್ಲಿ ವಿದ್ಯಾರ್ಥಿಗಳಿಗೆ ಸಾಂಪ್ರದಾಯಿಕ ನಾಟಿ ಕುರಿತು ಮಾಹಿತಿ ಕಾರ್ಯಾಗಾರ ಸಂಭ್ರಮದ ಸಾಗುವಳಿ ಕಾರ್ಯಕ್ರಮ ಮಣೂರಿನ ಕೃಷಿ ಕ್ಷೇತ್ರದಲ್ಲಿ ಜರಗಿತು.
ಕಾಲೇಜಿನ ಪದವಿ ಪೂರ್ವ ವಿಭಾಗದ ಪ್ರಾಂಶುಪಾಲ ಡೆನ್ನಿಸ್ ಬಾಂಝಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಯುವ ಜನಾಂಗ ಕೃಷಿ ಕ್ಷೇತ್ರದ ಕುರಿತು ಆಸಕ್ತಿ ಹೊಂದದಿದ್ದರೆ ಭವಿಷ್ಯದಲ್ಲಿ ಕೃಷಿ ಕ್ಷೇತ್ರ ಸಂಕಷ್ಟಕ್ಕೆ ಸಿಲುಕಲಿದೆ. ಕೃಷಿ ಕಾಯಕವನ್ನು ತಾತ್ಸಾರ ಮಾಡದೆ ತಮ್ಮ ಸ್ವಂತ ಜಮೀನಿನಲ್ಲಿ ಕೆಲಸ ಮಾಡುವಷ್ಟರ ಮಟ್ಟಿಗೆ ಆಸಕ್ತಿ ಮೂಡಿಸಿಕೊಳ್ಳಬೇಕು ಎಂದರು. ಈ ಸಂದರ್ಭ ವಿದ್ಯಾರ್ಥಿಗಳು ಗದ್ದೆಗಿಳಿದು ನೇಜಿ ನಾಟಿ ಮಾಡಿ ಸಂಭ್ರಮಿಸಿದರು. ಜನತಾ ಸಂಸ್ಥೆಯ ಪ್ರಬಂಧಕ ಶ್ರೀನಿವಾಸ್ ಕುಂದರ್, ಪಿಆರ್‍ಒ ರವಿಕಿರಣ್ ಹಾಗೂ ಜನತಾ ಪರಿವರದ ಸದಸ್ಯರು, ಉಪನ್ಯಾಸಕರು ಉಪಸ್ಥಿತರಿದ್ದರು.