Home » ಗುರು ಪೂರ್ಣಿಮೆಗೆ ಗುರುವಿಗೊಂದು ನುಡಿ ನಮನ
 

ಗುರು ಪೂರ್ಣಿಮೆಗೆ ಗುರುವಿಗೊಂದು ನುಡಿ ನಮನ

by Kundapur Xpress
Spread the love

ನಾನು ಆರಂಭವ ಮಾಡುವೆನಯ್ಯಾ, ಗುರುಪೂಜೆಗೆಂದು,

ನಾನು ಬೆವಹಾರವ ಮಾಡುವೆನಯ್ಯಾ, ಲಿಂಗಾರ್ಚನೆಗೆಂದು,

ನಾನು ಪರಸೇವೆಯ ಮಾಡುವೆನಯ್ಯಾ, ಜಂಗಮದಾಸೋಹಕ್ಕೆಂದು.

ನಾನಾವಾವ ಕರ್ಮಂಗಳ ಮಾಡಿದಡೆಯು

ಆ ಕರ್ಮಫಲಭೋಗವ ನೀ ಕೊಡುವೆ ಎಂಬುದ ನಾನು ಬಲ್ಲೆನು.

ನೀ ಕೊಟ್ಟ ದ್ರವ್ಯವ ನಿಮಗಲ್ಲದೆ ಮತ್ತೊಂದಕ್ಕೆ ಮಾಡೆನು,

ನಿಮ್ಮ ಸೊಮ್ಮಿಂಗೆ ಸಲಿಸುವೆನು.

ನಿಮ್ಮಾಣೆ ಕೂಡಲಸಂಗಮದೇವಾ.

ಗುರು ಪೂರ್ಣಿಮಾ ದಿವಸದಂದು ಚಾತುರ್ಮಾಸ್ಯ ವ್ರತವನ್ನು ಮಹಾಗುರು ವ್ಯಾಸರ ಪೂಜೆಯಿಂದ ಪ್ರಾರಂಭಿಸುತ್ತಾರೆ. ನಾಲ್ಕು ತಿಂಗಳು ನಡೆದು ಕಾರ್ತಿಕ ಪೂರ್ಣಿಮೆಯಂದು ವ್ರತ ಮುಕ್ತಾಯವಾಗುತ್ತದೆ. ಈ ಚಾತುರ್ಮಾಸ್ಯ ವ್ರತವನ್ನು ಶ್ರದ್ಧಾ ಭಕ್ತಿಗಳಿಂದ ಆಚರಿಸುವವರಿಗೆ ಸಮೃದ್ಧ ಆಹಾರ, ಸೌಂದರ್ಯ, ಸದ್ಬುದ್ಧಿ, ಸತ್‌ಸಂತಾನ ದೊರೆಯುವುದೆಂಬ ನಂಬಿಕೆಯಿದೆ. ಈ ದಿವಸವೇ ವೇದವ್ಯಾಸರು ಬ್ರಹ್ಮಸೂತ್ರ ಬರೆಯಲು ಪ್ರಾರಂಭಿಸಿದ್ದು, ಏಕಲವ್ಯ ಗುರು ದ್ರೋಣಾಚಾರ್ಯರಿಗೆ ಗುರು ಕಾಣಿಕೆಯಾಗಿ ತನ್ನ ಬಲಗೈ ಹೆಬ್ಬೆರಳನ್ನು ಕತ್ತರಿಸಿಕೊಟ್ಟಿದ್ದು ಗುರು ಪೂರ್ಣಿಮಾ ದಿವಸ.

*ಗುರುಪೂರ್ಣಿಮೆ*

ಮಾಯೆಯ ಭವಸಾಗರದಿಂದ ಶಿಷ್ಯ ಮತ್ತು ಭಕ್ತನನ್ನು ಹೊರತರುವ, ಅವನಿಂದ ಆವಶ್ಯಕವಿರುವ ಸಾಧನೆಯನ್ನು ಮಾಡಿಸಿಕೊಳ್ಳುವ ಮತ್ತು ಕಠಿಣ ಸಮಯದಲ್ಲಿ ಅವನಿಗೆ ಅತ್ಯಂತ ಹತ್ತಿರದಿಂದ ಹಾಗೂ ನಿರಪೇಕ್ಷ ಪ್ರೇಮದಿಂದ ಆಧಾರವನ್ನು ನೀಡಿ ಸಂಕಟಮುಕ್ತ ಮಾಡುವವ ಗುರು. ಇಂತಹ ಪರಮ ಪೂಜನೀಯ ಗುರುಗಳ ಬಗ್ಗೆ ಕೃತಜ್ಞತೆ ವ್ಯಕ್ತ ಮಾಡುವ ದಿನವೆಂದರೆ ಗುರುಪೂರ್ಣಿಮೆ.

ತಿಥಿ ಹಾಗೂ ಉದ್ದೇಶ :

ಗುರುಪೂರ್ಣಿಮೆ ಮಹೋತ್ಸವವನ್ನು ಎಲ್ಲೆಡೆ ಆಷಾಢ ಹುಣ್ಣಿಮೆಯಂದು ಆಚರಿಸಲಾಗುತ್ತದೆ. ತಮಿಳುನಾಡಿನಲ್ಲಿ ವ್ಯಾಸಪೂಜೆಯನ್ನು ಜ್ಯೇಷ್ಠ ಪೂರ್ಣಿಮೆಯಂದು ಮಾಡುತ್ತಾರೆ. ಗುರು ಎಂದರೆ ಈಶ್ವರನ ಸಗುಣ ರೂಪ. ವರ್ಷಾದ್ಯಂತ ಪ್ರತಿಯೊಬ್ಬ ಗುರುಗಳು ತಮ್ಮ ಭಕ್ತರಿಗೆ ಅಧ್ಯಾತ್ಮದ ಬೋಧಾಮೃತವನ್ನು ನೀಡುತ್ತಿರುತ್ತಾರೆ. ಆ ಗುರುಗಳ ಬಗ್ಗೆ ಕೃತಜ್ಞತೆಯನ್ನು ವ್ಯಕ್ತಪಡಿಸುವುದೇ ಗುರುಪೂರ್ಣಿಮೆ ಆಚರಿಸುವುದರ ಹಿಂದಿನ ಉದ್ದೇಶವಾಗಿದೆ.

*ಮಹತ್ವ*

ಗುರುಪೂರ್ಣಿಮೆಯಂದು ಗುರುತತ್ತ್ವವು (ಈಶ್ವರೀ ತತ್ತ್ವವು) ಇತರ ದಿನಗಳ ತುಲನೆಯಲ್ಲಿ ಒಂದು ಸಾವಿರ ಪಟ್ಟು ಹೆಚ್ಚು ಕಾರ್ಯನಿರತವಾಗಿರುತ್ತದೆ. ಆದ್ದರಿಂದ ಗುರುಪೂರ್ಣಿಮೆಯ ನಿಮಿತ್ತ ಮೊದಲಿನಿಂದಲೂ ಮನಃಪೂರ್ವಕ ಮಾಡಿದ ಸೇವೆ ಮತ್ತು ತ್ಯಾಗಗಳ ಲಾಭವು ಇತರ ದಿನಗಳ ತುಲನೆಯಲ್ಲಿ ವ್ಯಕ್ತಿಗೆ ಒಂದು ಸಾವಿರ ಪಟ್ಟು ಹೆಚ್ಚಾಗುತ್ತದೆ. ಆದ್ದರಿಂದ ಗುರುಪೂರ್ಣಿಮೆಯು ಈಶ್ವರ ಕೃಪೆಯ ಒಂದು ಅಮೂಲ್ಯ ಪರ್ವಕಾಲವೇ ಆಗಿದೆ.

ಗುರವೋ ಬಹವಃ ಸಂತಿ ಶಿಷ್ಯವಿತ್ತಾಪಹಾರಕಾಃ |

ದುರ್ಲಭಃ ಸ ಗುರುರ್ಲೋಕೇ ಶಿಷ್ಯಚಿತ್ತಾಪಹಾರಕಃ||

ಗುರು-ಶಿಷ್ಯ ಪರಂಪರೆಯು ಹಿಂದೂಗಳ ಲಕ್ಷಾವಧಿ ವರ್ಷಗಳ ಚೈತನ್ಯಮಯ ಸಂಸ್ಕೃತಿಯಾಗಿದೆ. ಆದರೆ ಕಾಲದ ಪ್ರವಾಹದಲ್ಲಿ ರಜ, ತಮಪ್ರಧಾನ ಸಂಸ್ಕೃತಿಯ ಪ್ರಭಾವದಿಂದಾಗಿ ಮಹಾನ ಗುರು-ಶಿಷ್ಯ ಪರಂಪರೆಯನ್ನು ನಿರ್ಲಕ್ಷಿಸಲಾಗುತ್ತಿದೆ. ಗುರುಪೂರ್ಣಿಮೆಯ ನಿಮಿತ್ತದಿಂದ ಗುರುಪೂಜೆಯಾಗುತ್ತದೆ, ಹಾಗೆಯೇ ಗುರು-ಶಿಷ್ಯ ಪರಂಪರೆಯ ಶ್ರೇಷ್ಠತೆಯನ್ನು ಸಮಾಜಕ್ಕೆ ಹೇಳಲು ಸಾಧ್ಯವಾಗುತ್ತದೆ. ಸುಲಭವಾಗಿ ಹೇಳುವುದಾದರೆ ಗುರು-ಶಿಷ್ಯ ಪರಂಪರೆಯನ್ನು ಉಳಿಸಿಕೊಳ್ಳುವ ಸದವಕಾಶ ಲಭಿಸುತ್ತದೆ.

ಉತ್ಸವವನ್ನು ಆಚರಿಸುವ ಪದ್ಧತಿ

ಗುರುಗಳ ಬಗ್ಗೆ ಕೃತಜ್ಞತೆಯನ್ನು ವ್ಯಕ್ತಪಡಿಸಲು ಎಲ್ಲ ಗುರುಗಳ ಶಿಷ್ಯರು ಈ ದಿನದಂದು ಗುರುಗಳ ಪಾದಪೂಜೆಯನ್ನು ಮಾಡಿ ಅವರಿಗೆ ಗುರುದಕ್ಷಿಣೆಯನ್ನು ಅರ್ಪಿಸುತ್ತಾರೆ. ಈ ದಿನ ವ್ಯಾಸಪೂಜೆಯನ್ನು ಮಾಡುವ ಪದ್ಧತಿಯೂ ಇದೆ. ಗುರುಪರಂಪರೆಯಲ್ಲಿ ವ್ಯಾಸರನ್ನು ಸರ್ವಶ್ರೇಷ್ಠ ಗುರು ಎಂದು ಪರಿಗಣಿಸಲಾಗಿದೆ. ಎಲ್ಲ ವೇದಗಳು ಉಗಮವು ವ್ಯಾಸರಿಂದಲೇ ಆಗುತ್ತದೆ ಎನ್ನುವುದು ಭಾರತೀಯರ ನಂಬಿಕೆ. ಕುಂಭಕೋಣಮ್ ಮತ್ತು ಶೃಂಗೇರಿ ಇವು ದಕ್ಷಿಣ ಭಾರತದಲ್ಲಿನ ಶಂಕರಾಚಾರ್ಯರ ಪ್ರಸಿದ್ಧ ಪೀಠಗಳಾಗಿವೆ. ಇಲ್ಲಿ ವ್ಯಾಸಪೂಜಾ ಮಹೋತ್ಸವವು ನಡೆಯುತ್ತದೆ. ವ್ಯಾಸಮಹರ್ಷಿಗಳು ಮತ್ತೊಮ್ಮೆ ಶಂಕರಾಚಾರ್ಯರ ರೂಪದಲ್ಲಿ ಅವತರಿಸಿದರು ಎನ್ನುವುದು ಭಕ್ತರ ಶ್ರದ್ಧೆ. ಆದುದರಿಂದ ಈ ದಿನ ಸಂನ್ಯಾಸಿಗಳು ವ್ಯಾಸಪೂಜೆ ಎಂದು ಶಂಕರಾಚಾರ್ಯರ ಪೂಜೆಯನ್ನು ಮಾಡುತ್ತಾರೆ.

ವಾಸ್ತವವಾಗಿ, ಹಿಂದೂಮತದ ಕೆಲವು ಪ್ರಕಾರಗಳಲ್ಲಿ ಭಕ್ತರು ಗುರು ಮತ್ತು ದೇವರ ಜೊತೆ ತೋರಿಸಲ್ಪಟ್ಟರೆ, ಮೊದಲಿಗೆ ಭಕ್ತನು ಗುರುವಿಗೆ ಗೌರವವನ್ನು ತೋರಿಸುತ್ತಾನೆ ಏಕೆಂದರೆ ಗುರುವು ಅವನನ್ನು ದೇವರೆಡೆಗೆ ಕರೆದೊಯ್ಯುವ ಒಂದು ಸಾಧನವಾಗಿದ್ದಾನೆ. ಗುರು ಎಂಬ ವಿಷಯವು ಅತಿ ಹಳೆಯದಾದ ಉಪನಿಷತ್ತುಗಳ ಕಾಲದಿಂದಲೂ ಇತ್ತು ಎಂಬುದಾಗಿ ಕಂಡು ಹಿಡಿಯಲಾಗಿದೆ. ಅಲ್ಲಿ ಭೂಮಿಯ ಮೇಲಿನ ದೈವಿಕತೆಯೆ ಗುರು. ಆದುದರಿಂದ ಕೆಲವು ಸಂಪ್ರದಾಯಗಳು “ಗುರು, ದೇವರು ಮತ್ತು ಸ್ವಯಂ” (ಸ್ವಯಂ ಅಂದರೆ ಆತ್ಮ, ವ್ಯಕ್ತಿಯಲ್ಲ) ಒಂದೇ ಎಂಬುದಾಗಿ ಹೇಳುತ್ತವೆ.

*ಗುರು*

ಸಾಮಾನ್ಯವಾಗಿ ಗುರು ಎಂದರೆ ಒಂದು ನಿರ್ದಿಷ್ಟ ವಿಭಾಗದಲ್ಲಿ ಹೆಚ್ಚಿನ ಜ್ಞಾನ, ಬುದ್ಧಿವಂತಿಕೆ ಮತ್ತು ನಿಪುಣತೆಯನ್ನು ಹೊಂದಿರುವ, ಮತ್ತು ಇತರರಿಗೆ ನಿರ್ದೇಶನವನ್ನು ನೀಡಲು ಈ ಬುದ್ಧಿವಂತಿಕೆಗಳನ್ನು ಬಳಸುವ ವ್ಯಕ್ತಿ ಎಂದರ್ಥವಾಗುತ್ತದೆ. ಸಂಸ್ಕೃತದಲ್ಲಿ ‘ಗು’ ಅಂದರೆ ಅಂಧಕಾರ ಮತ್ತು ‘ರು’ ಅಂದರೆ ಬೆಳಕು.

ಅರಿವಿನ ಅಭಿವೃದ್ಧಿಯ ಒಂದು ಮೂಲತತ್ವವಾಗಿ ಇದು ಕಾಲ್ಪನಿಕತೆಯಿಂದ ನಿಜಸ್ಥಿತಿಯ ನಿರ್ಮಾಣಕ್ಕೆ, ಅಜ್ಞಾನದ ಅಂಧಕಾರದಿಂದ ಜ್ಞಾನದ ಬೆಳಕಿನೆಡೆಗೆ ಕರೆದೊಯ್ಯುತ್ತದೆ. ಇದರ ಮೂಲರೂಪದಲ್ಲಿ ಈ ’ಗುರು’ ಪರಂಪರೆಯ ತತ್ವವು ಭೂಮಿಯಲ್ಲಿಯ ಒಂದು ದೈವಿಕ ಮೂರ್ತರೂಪ. ’ಗುರು’ ಭೂಮಿಯ ಮೇಲಿರುವ ಅತಿಭೌತಿಕ ಹಾಗೂ ಉನ್ನತ ಶಕ್ತಿಯ ಕುರಿತಾದ ಅತ್ಯುನ್ನತ ಜ್ಞಾನವನ್ನು ಹೊಂದಿರುವ ಒಬ್ಬ ವ್ಯಕ್ತಿ.

“ಗುರು” ಎಂಬ ಪದವನ್ನು ಹಿಂದುತ್ವದಲ್ಲಿ ದೈವಸ್ವರೂಪಿ ವ್ಯಕ್ತಿತ್ವದ ಬೃಹಸ್ಪತಿಗೆ ಹೇಳಲಾಗುತ್ತದೆ.

ವೈದಿಕ ಜ್ಯೋತಿಷ್ಯ ಶಾಸ್ತ್ರದಲ್ಲಿ, ಗುರು ಅಥವಾ ಬೃಹಸ್ಪತಿಯು ಕಲಿಕೆಯ ಮೇಲೆ ಪ್ರಭಾವ ಬೀರುತ್ತಾರೆ ಎಂದು ನಂಬಲಾಗಿದೆ. ಆದಾಗ್ಯೂ, ಹಿಂದಿಯಂತಹ ಹಲವಾರು ಭಾರತೀಯ ಭಾಷೆಗಳಲ್ಲಿ, ಪಾಶ್ಚಾತ್ಯರ Thursday ಬೃಹಸ್ಪತಿವಾರ ಅಥವಾ ಗುರುವಾರ (ವಾರ ಅಂದರೆ ಸಪ್ತಾಹದ ಒಂದು ದಿನ) ಎಂದು ಕರೆಯಲ್ಪಡುತ್ತದೆ. ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ, “ಗುರು” ಎಂಬ ಶಬ್ದವು ವ್ಯಾಪಕವಾಗಿ “ಶಿಕ್ಷಕ” ಎಂಬ ಸಾಮಾನ್ಯ ಅರ್ಥದ ಜೊತೆ ಬಳಸಲ್ಪಡುತ್ತದೆ.

ಗುರುವಿನ ಪಾತ್ರ

ಗುರುವಿನ ಪಾತ್ರವು ವೇದಾಂತ, ಯೋಗ, ತಂತ್ರ ಮತ್ತು ಭಕ್ತಿಗಳಂತಹ ಹಿಂದೂ ಸಂಪ್ರದಾಯದ ಶಬ್ದಗಳ ಮೂಲ ಅರ್ಥದಲ್ಲಿ ಮುಂದುವರೆಯುತ್ತ ಹೋಗುತ್ತದೆ. ವಾಸ್ತವವಾಗಿ, ಭೂಮಿಯ ಮೇಲೆ ಒಬ್ಬ ಗುರುವು ಒಬ್ಬ ವ್ಯಕ್ತಿಯ ಆಧ್ಯಾತ್ಮಿಕ ನಿರ್ದೇಶಕ. ಗುರುವು ತನ್ನ ಶಿಷ್ಯರಲ್ಲಿ ಸುಪ್ತ ಮನಸ್ಸಿನಲ್ಲಿ ಆಧ್ಯಾತ್ಮಿಕ ಜ್ಞಾನಗಳನ್ನು ಜಾಗೃತಗೊಳಿಸುತ್ತಾನೆ. ಈ ಕ್ರಿಯೆಗೆ ಶಕ್ತಿಪಥ ಎಂದು ಕರೆಯುತ್ತಾರೆ.

ಸರ್ವ ಗುರುವರ್ಯರಿಗೂ, ಗುರು ಪರಂಪರೆಗೂ ಗುರು ಪೂರ್ಣಿಮೆಯ ನಮನಗಳು  

ಶ್ರೀಮತಿ ಸ್ವರ್ಣ ಕುಂದಾಪುರ

ಆಪ್ತ ಸಮಾಲೋಚಕಿ

 

Related Articles

error: Content is protected !!