ಕೋಟೇಶ್ವರ : ಕೋಟೇಶ್ವರ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಬ್ರಹ್ಮರಥೋತ್ಸವ ಭಾನುವಾರ ಕುಂಭ ಲಗ್ನದ ಸುಮುಹೂರ್ತದಲ್ಲಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ಸಡಗರ ಸಂಭ್ರಮದಿಂದ ಜರುಗಿತು
ದೇವಳದ ಪ್ರಧಾನ ತಂತ್ರಿಗಳಾದ ವೇದ ಮೂರ್ತಿ ಪ್ರಸನ್ನ ಕುಮಾರ್ ಐತಾಳ್ ನೇತೃತ್ವದಲ್ಲಿ ಋತ್ವಿಜರ ಸಹಕಾರದೊಂದಿಗೆ ಪಂಚ ವಾದ್ಯಗಳು, ಪಾರಂಪರಿಕ ಸೂರ್ಯವಾದ್ಯ, ತಟ್ಟಿರಾಯ, ಚಂಡೆ ಹಾಗೂ ವಾದ್ಯ ಮೇಳಗಳೊಂದಿಗೆ ವೈಭವದ ಮೆರವಣಿಗೆಯಲ್ಲಿ ಬಂದ ಕೋಟಿಲಿಂಗೇಶ್ವರ ಹಾಗೂ ಪರಿವಾರ ದೇವತೆಗಳನ್ನು ರಥದಲ್ಲಿ ಕುಳ್ಳಿರಿಸಿ ಮಂಗಳಾರತಿ, ಹಣ್ಣುಕಾಯಿ ಹಾಗೂ ರಥದ ಚಕ್ರಗಳಿಗೆ ಕಾಯಿ ಒಡೆಯುವ ಪಾರಂಪರಿಕ ಧಾರ್ಮಿಕ ಪದ್ಧತಿ ಮುಗಿಸಿದ ಬಳಿಕ ರಥಬೀದಿಯಲ್ಲಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು
ಶ್ರೀ ಮನ್ಮಹಾರಥೋತ್ಸವದ ಆರೋಹಣಕ್ಕೆ ಚಾಲನೆ ನೀಡುತ್ತಿದ್ದಂತೆ ಭಕ್ತರ ಹರ್ಷೋದ್ಗಾರ ಮುಗಿಲು ಮುಟ್ಟಿತು ಮಂಚಕಲ್ಲು ಪಿಲ್ಲಾರ್ ಕಾಣ ಶ್ರೀಧರ ಉಡುಪ ಉತ್ಸವ ಮೂರ್ತಿ ಹೊತ್ತು ತಾಂಡವ ನೃತ್ಯ ಸೇವೆ ಸಲ್ಲಿಸಿದರು
ಪ್ರತಿ ವರ್ಷದಂತೆ ಈ ಭಾರಿಯೂ ರಥೋತ್ಸವದ ಆರಂಭಕ್ಕೆ ಮೊದಲು ಗರುಡ ಪ್ರದಕ್ಷಿಣೆ ಮಾಡುತ್ತಿದ್ದಂತೆ ಭಕ್ತ ಸಮೂಹವು ಹರಹರ ಮಹಾದೇವ ಘೋಷಣೆ ಮೊಳಗಿಸಿದರು
ಕುಂದಾಪುರ ಹಾಗೂ ಪರವೂರಿನಿಂದ ಸುಮಾರು 50 ಸಾವಿರಕ್ಕೂ ಮಿಕ್ಕಿ ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡರು ಭಕ್ತರ ನೂಕುನುಗ್ಗಲನ್ನು ತಪ್ಪಿಸಲು ಪೊಲೀಸರು ಬಿಗು ಪೊಲೀಸ್ ಬಂದೋಬಸ್ತನ್ನು ಎರ್ಪಡಿಸಿದ್ದರು

