ಮಂಗಳೂರು: ದ.ಕ.ಲೋಕಸಭಾ ಬಿಜೆಪಿ ಟಿಕೆಟ್ ಆಕಾಂಕ್ಷಿಗಳ ಸಾಲಿಗೆ ಅರುಣ್ ಕುಮಾರ್ ಪುತ್ತಿಲ ಬಳಿಕ ಈಗ ಮತ್ತೊಬ್ಬ ಹಿಂದು ಮುಖಂಡ ಹೋರಾಟಗಾರನ ಹೆಸರು ಸೇರ್ಪಡೆಯಾಗಿದೆ. ಕರಾವಳಿಯ ಹಿಂದುತ್ವದ ಪ್ರಭಾವಿ ಮುಖಂಡ ಸತ್ಯಜಿತ್ ಸುರತ್ಕಲ್ ಮತ್ತೆ ಅಖಾಡಕ್ಕೆ ಇಳಿಯುವ ಸೂಚನೆ ನೀಡಿದ್ದಾರೆ. ಅಲ್ಲದೆ ಎಲ್ಲ ಅಸೆಂಬ್ಲಿ ಕ್ಷೇತ್ರಗಳಲ್ಲಿ ಬೂತ್ ಮಟ್ಟದ ಸಮಿತಿ ರಚನೆಗೆ ಮುಂದಾಗಿದ್ದಾರೆ. ಇದು ಕರಾವಳಿ ಬಿಜೆಪಿಗೆ ಮತ್ತೆ ತಲೆ ನೋವಾಗುತ್ತಾ ಎಂಬ ಪ್ರಶ್ನೆ ತಲೆದೋರಿದೆ.
ಸತ್ಯಜಿತ್ ಸುರತ್ಕಲ್ ಗೆ ಟಿಕೆಟ್ ನೀಡಬೇಕು ಎಂದು ಸತ್ಯಜಿತ್ ಅಭಿಮಾನಿ ಬಳಗ ರಹಸ್ಯ ಸಭೆ ನಡೆಸಿದೆ. ಈ ಸಭೆ ದ.ಕ.ಜಿಲ್ಲೆಯ ಬಂಟ್ವಾಳ ತಾಲೂಕಿನ ಬಿ.ಸಿ.ರೋಡಿನ ಮಠ ಎಂಬಲ್ಲಿ ನಡೆದಿದೆ. ಅಲ್ಲಿನ ಹಿಂದೂ ಜಾಗರಣಾ ವೇದಿಕೆ ಸಂಘಟನೆಯ ಪ್ರಮುಖರೊಬ್ಬರ ಮನೆಯಲ್ಲಿ ಸಭೆ ನಡೆಸಲಾಗಿದ್ದು ನೂರಾರು ಮಂದಿ ಭಾಗಿಯಾಗಿದ್ದಾರೆ ಸಭೆಯಲ್ಲಿ ಟಿಕೆಟ್ ಆಕಾಂಕ್ಷಿ, ಬಿಲ್ಲವ ಸಮಾಜದ ಮುಖಂಡ ಸತ್ಯಜಿತ್ ಸುರತ್ಕಲ್ ಭಾಗಿಯಾಗಿ ಮಾತನಾಡಿದ್ದಾರೆ

ಫೆ.25 ರಂದು ಸತ್ಯಜಿತ್ ಪರ ಸಮಾವೇಶ
ಈ ಸಭೆಯಲ್ಲಿ ದ.ಕ. ಜಿಲ್ಲೆಯ ಎಂಟು ಅಸೆಂಬ್ಲಿ ಕ್ಷೇತ್ರದ ಪ್ರಮುಖರ ಸಭೆ ನಡೆಸಲಾಗಿದೆ. ಫೆ. 25ರಂದು ಜಿಲ್ಲೆಯಲ್ಲಿ ಸತ್ಯಜಿತ್ ಪರವಾಗಿ ಸಮಾವೇಶ ನಡೆಸುವ ಸಾಧ್ಯತೆ ಇದೆ. ಸತ್ಯಜಿತ್‌ಗೆ ಟಿಕೆಟ್ ನೀಡುವಂತೆ ರಾಜ್ಯ ಬಿಜೆಪಿ ಹಾಗೂ ದೆಹಲಿಯ ವರಿಷ್ಠರಿಗೆ ಬೇಡಿಕೆ ಇರಿಸಲು ತೀರ್ಮಾನಿಸಲಾಗಿದೆ. ಎಲ್ಲ ವಿಧಾನ ಸಭಾ ಕ್ಷೇತ್ರಗಳಲ್ಲಿ ತಾಲೂಕು ಹಾಗೂ ವಾರ್ಡ್ ಕಮಿಟಿಗಳ ರಚನೆಗೆ ನಿರ್ಧರಿಸಲಾಗಿದ್ದು, ಬಳಿಕ ಜಿಲ್ಲಾ ವಾರ್ಡ್, ತಾಲೂಕು ವಾರ್ಡ್ ಮತ್ತು ಗ್ರಾಮ ಮಟ್ಟದ ವಾರ್ಡ್ ಸಂಚಾಲಕರ ನೇಮಕಗೊಳಿಸುವುದು, ಅ ಮೂಲಕ ಸಭೆಗಳನ್ನು ನಡೆಸಿ ಕಾರ್ಯಕರ್ತರ ಸಂಘಟನೆ ಮಾಡುವ ಬಗ್ಗೆ ತೀರ್ಮಾನಿಸಲಾಗಿದೆ.

