ಗಂಗೊಳ್ಳಿ : ದೇವರಲ್ಲಿ ಭಕ್ತಿಯಿಂದ ಸಲ್ಲಿಸಿದ ಪ್ರಾರ್ಥನೆಗೆ ಖಂಡಿತವಾಗಿ ಫಲ ಸಿಗುತ್ತದೆ. ನಾವು ಸತ್ಕರ್ಮಗಳನ್ನು ನಿರಂತರವಾಗಿ ಮಾಡುತ್ತಾ ಹೋಗಬೇಕು. ಇದರಿಂದ ಯಾವುದೇ ಫಲವನ್ನು ನಿರೀಕ್ಷಿಸಬಾರದು. ನಾವು ಮಾಡುವ ಪ್ರತಿಯೊಂದು ಸತ್ಕರ್ಮಗಳಿಗೆ ದೇವರು ಸಂತುಷ್ಟಗೊಂಡು ಸಕಾಲದಲ್ಲಿ ನಮ್ಮ ಮನೋಭಿಷ್ಟಗಳನ್ನು ನೆರವೇರಿಸುತ್ತಾನೆ ಎಂದು ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶ ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿ ಹೇಳಿದರು.
ಗಂಗೊಳ್ಳಿಯ ಮಲ್ಯರಮಠ ಶ್ರೀ ವೆಂಕಟರಮಣ ದೇವಸ್ಥಾನಕ್ಕೆ ಮೊಕ್ಕಾಂ ನಿಮಿತ್ತ ಗುರುವಾರ ಚಿತ್ತೈಸಿದ ಶ್ರೀಗಳು ಆಶೀರ್ವಚನ ನೀಡಿದರು.
ಮಠಕ್ಕೆ 550 ವರ್ಷ ಪೂರ್ಣಗೊಳ್ಳುವ ಸಂದರ್ಭ ಹಮ್ಮಿಕೊಳ್ಳಲಾದ ಶ್ರೀ ರಾಮ ನಾಮ ತಾರಕ ಜಪ ಕಾರ್ಯಕ್ಕೆ ಎಲ್ಲರೂ ಕೈಜೋಡಿಸಿ ಶಕ್ತ್ಯಾನುಸಾರ ಜಪವನ್ನು ಮಾಡಿ ದೇವರ ಮತ್ತು ಗುರುಗಳ ಕೃಪೆಗೆ ಪಾತ್ರರಾಗುತ್ತಿದ್ದಾರೆ. ಮುಂದಿನ ವರ್ಷ ಪರ್ತಗಾಳಿ ಮಠದಲ್ಲಿ ಈ ಸಂಬಂಧ ದೊಡ್ಡ ಧಾರ್ಮಿಕ ಅನುಷ್ಠಾನ, ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಲ್ಲಾ ಕಾರ್ಯಕ್ರಮಗಳಲ್ಲಿ ಸಮಾಜಬಾಂಧವರು ಪಾಲ್ಗೊಂಡು ದೇವರ ಮತ್ತು ಗುರುಗಳ ಸೇವೆ ಸಲ್ಲಿಸುವಂತಾಗಬೇಕು ಎಂದರು.
ದೇವಸ್ಥಾನದ ಆಡಳಿತ ಮಂಡಳಿಯ ಜಿ.ವೇದವ್ಯಾಸ ಕೆ.ಆಚಾರ್ಯ ಮತ್ತು ಜಿ.ವೆಂಕಟೇಶ ನಾಯಕ್ ಗುರುಗಳ ಪಾದ್ಯಪೂಜೆ ಮಾಡಿದರು. ದೇವಸ್ಥಾನದ ಪ್ರಧಾನ ಅರ್ಚಕ ಎಸ್.ವೆಂಕಟರಮಣ ಆಚಾರ್ಯ, ತಾಂತ್ರಿಕ ಜಿ.ವಸಂತ ಭಟ್, ಎಸ್.ಪಾಂಡುರAಗ ಆಚಾರ್ಯ, ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರು, ಊರ, ಪರ ಊರಿನ ಜಿಎಸ್‌ಬಿ ಸಮಾಜಬಾಂಧವರು, ಭಕ್ತರು ಮೊದಲಾದವರು ಉಪಸ್ಥಿತರಿದ್ದರು.