ಬೈಂದೂರು : ಬೈಂದೂರು ತಾಲೂಕಿನ ಹಕ್ಲಾಡಿಯಲ್ಲಿ ವೆಂಟೆಡ್ ಡ್ಯಾಂನ ಅವೈಜ್ಞಾನಿಕ ಕಾಮಗಾರಿ ಮತ್ತು ಕಳಪೆ ಹಲಗೆ ಬಳಕೆ ಮಾಡಿರುವುದರ ಹಿನ್ನೆಲೆಯಲ್ಲಿ ಸಣ್ಣ ನೀರಾವರಿ ಇಲಾಖೆಯ ವಿರುದ್ದ ಬೈಂದೂರು ಶಾಸಕರಾದ ಗುರುರಾಜ್ ಗಂಟಿಹೊಳೆಯವರು ಹಕ್ಲಾಡಿಯಲ್ಲಿ ಸ್ಥಳೀಯರೊಂದಿಗೆ ಪ್ರತಿಭಟನೆಯನಲ್ಲಿ ಭಾಗಿಯಾದರು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಶಾಸಕರು, ಕ್ಷೇತ್ರದಾದ್ಯಂತ ಈ ರೀತಿಯ ಉಪಯೋಗಕ್ಕೆ ಬಾರದ ಹಲಗೆಗಳನ್ನು ಉಪಯೋಗಿಸಿ ಅಣೆಕಟ್ಟು ನಿರ್ಮಿಸುವ ಕುರಿತು ಅನೇಕ ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಲೆಕ್ಕಿಸದೆ ಅದೇ ಹಲಗೆಯನ್ನು ಹಾಕಲು ಮುಂದಾಗಿರುವ ಕ್ರಮವನ್ನು ಖಂಡಿಸುತ್ತೇನೆ ಎಂದರು.
ಸ್ಥಳೀಯ ಜನರ ಕಷ್ಟ ಸುಖಗಳನ್ನು ಕೇಳದೆ ಮನಬಂದಂತೆ ವರ್ತಿಸುತ್ತಿರುವ ಅಧಿಕಾರಿಗಳ ಈ ಕ್ರಮವನ್ನು ಖಂಡಿಸಿ ಈಗಾಗಲೇ ಅಧಿಕಾರಿಗಳನ್ನು ಕರೆದು ಮಾತನಾಡಿದರೂ ಯಾವುದನ್ನೂ ಲೆಕ್ಕಿಸದೆ ಮನಸೋ ಇಚ್ಛೆಯಂತೆ ವರ್ತಿಸುತ್ತಿರುವುದು ವಿಪರ್ಯಾಸ ಎಂದರು. ಸ್ಥಳೀಯರ ಸಲಹೆ ತೆಗೆದುಕೊಂಡು ಅದರಂತೆ ಕೆಲಸವನ್ನು ನಿರ್ವಹಿಸಬೇಕು ಮತ್ತು ಈಗಾಗಲೇ ಈ ಇಲಾಖೆಯಡಿ ಆಗಿರುವ ಅವ್ಯವಸ್ಥೆಗಳ ತನಿಖೆ ನಡೆಯಬೇಕು ಮತ್ತು ತಕ್ಷಣವೇ ಈ ಸಮಸ್ಯೆಯನ್ನು ಪರಿಹರಿಸಬೇಕು ಎಂದು ಶಾಸಕರು ಆಗ್ರಹಿಸಿದರು

