ಸೇಲಂ : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ‘ಶಕ್ತಿ’ ಹೇಳಿಕೆಯ ವಿರುದ್ಧ ಸತತ 2ನೇ ದಿನವೂ ಹರಿತ ವಾಗ್ದಾಳಿ ಮುಂದುವರಿಸಿರುವ ಪ್ರಧಾನಿ ನರೇಂದ್ರ ಮೋದಿ ‘ಯಾರು ಶಕ್ತಿಯನ್ನು ನಾಶ ಮಾಡಲು ಹೋಗುತ್ತಾರೋ ಅವರೇ ನಾಶವಾಗಿ ಬಿಡುತ್ತಾರೆ ‘ ಎಂದು ಅಬ್ಬರಿಸಿದ್ದಾರೆ. ಅಲ್ಲದೆ ಇಂಡಿಯಾ ಮೈತ್ರಿಕೂಟ ಕೇವಲ ಹಿಂದೂ ಧರ್ಮವನ್ನು ಮಾತ್ರವೇ ಗುರಿ ಮಾಡುತ್ತದೆ ಎಂದು ಕಿಡಿಕಾರಿದ್ದಾರೆ.
ತಮಿಳುನಾಡಿನ ಸೇಲಂನಲ್ಲಿ ಮಂಗಳವಾರ ಬಿಜೆಪಿ ಸಮಾವೇಶ ಉದ್ದೇಶಿಸಿ ಮಾತನಾಡಿದ ಮೋದಿ, ‘ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಡಿಎಂಕೆ ಸೇರಿದಂತೆ ಅವರ ಇಂಡಿಯಾ ಒಕ್ಕೂಟದ ಅಂಗಪಕ್ಷಗಳು ‘ಶಕ್ತಿ’ ವಿರುದ್ಧ ಹೋರಾಡುವುದಾಗಿ ಹೇಳಿವೆ. ತಮಿಳುನಾಡಿನ ಜನತೆಗೆ ಹಿಂದೂ ಧರ್ಮದಲ್ಲಿ ‘ಶಕ್ತಿ’ ಎಂದರೇನು ಗೊತ್ತೇ ಇದೆ’ ಎಂದು ಹೇಳಿದರು.