Home » ಶಿರೂರು ಮಠ : ಕಟ್ಟಿಗೆ ಮೂಹೂರ್ತ ಸಂಪನ್ನ
 

ಶಿರೂರು ಮಠ : ಕಟ್ಟಿಗೆ ಮೂಹೂರ್ತ ಸಂಪನ್ನ

by Kundapur Xpress
Spread the love

ಉಡುಪಿ : ಉಡುಪಿ ಶ್ರೀ ಕೃಷ್ಣಮಠದಲ್ಲಿ 2026-28ರಲ್ಲಿ ನಡೆಯಲಿರುವ ಶಿರೂರು ಮಠದ ಪರ್ಯಾಯೋತ್ಸವಕ್ಕೆ ಪೂರ್ವಭಾವಿಯಾಗಿ ಕಟ್ಟಿಗೆ ಮುಹೂರ್ತ ಭಾನುವಾರ ವಿಧ್ಯುಕ್ತವಾಗಿ ಉಡುಪಿಯಲ್ಲಿ ಸಂಪನ್ನಗೊಂಡಿತು.

ತಮ್ಮ 19ನೇ ವಯಸ್ಸಿನಲ್ಲಿ ಪ್ರಥಮ ಬಾರಿಗೆ ಪರ್ಯಾಯ ಪೀಠವನ್ನೇರಲಿರುವ ಶಿರೂರು ಮಠಾಧೀಶ ಶ್ರೀ ವೇದವರ್ಧನತೀರ್ಥ ಸ್ವಾಮೀಜಿ ಅವರು ಈ ಮುಹೂರ್ತದ ಸಂದರ್ಭದಲ್ಲಿ ಉಪಸ್ಥಿತರಿದ್ದು, ಇದು ಕೃಷ್ಣನ ಭಕ್ತರ ಪರ್ಯಾಯೋತ್ಸವವಾಗಿದ್ದು ಭಕ್ತರು ಅದನ್ನು ಯಶಸ್ವಿಗೊಳಿಸಬೇಕು ಎಂದು ಆಶಯ ವ್ಯಕ್ತಪಡಿಸಿದರು.

ಪರ್ಯಾಯೋತ್ಸವಕ್ಕೆ ಪೂರ್ವಭಾವಿಯಾಗಿ 4 ಮುಹೂರ್ತಗಳು ನಡೆಯಲಿದ್ದು, ಈಗಾಗಲೇ ಬಾಳೆ ಮುಹೂರ್ತ ಮತ್ತು ಅಕ್ಕಿ ಮುಹೂರ್ತಗಳು ನಡೆದಿವೆ. ಇದೀಗ ಕಟ್ಟಿಗೆ ಮುಹೂರ್ತ ಸಂಪನ್ನಗೊಂಡಿದ್ದು. ಡಿಸೆಂಬರ್‌ನಲ್ಲಿ ಭತ್ತ ಮುಹೂರ್ತ ನಡೆಯಲಿದೆ 

ಭಾನುವಾರ ಬೆಳಗ್ಗೆ ಶಿರೂರು ಮಠದಲ್ಲಿ ದಿವಾನ ಡಾ. ಉದಯಕುಮಾರ ಸರಳತ್ತಾಯರು ನೇತೃತ್ವದಲ್ಲಿ ಪುರೋಹಿತ ಗಿರಿರಾಜ ಉಪಾಧ್ಯಾಯರು ವಿಠಲ ದೇವರಿಗೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ, ರಥಬೀದಿಯಲ್ಲಿ ಚಂದ್ರೇಶ್ವರ, ಅನಂತೇಶ್ವರ, ನಂತರ ಕೃಷ್ಣಮಠದಲ್ಲಿ ಕೃಷ್ಣಮುಖ್ಯಪ್ರಾಣ ದೇವರಿಗೆ ಪ್ರಾರ್ಥನೆ ಸಲ್ಲಿಸಲಾಯಿತು. 

ನಂತರ ಸುರಿಯುತ್ತಿದ್ದ ಮಳೆಯಲ್ಲಿಯೇ ಕಲ್ಪಂಕದ ಬಳಿ ಇರುವ ಲಕ್ಷ್ಮೀತೋಟದಿಂದ ಕಟ್ಟಿಗೆಗಳನ್ನು ಮೂರು ಎತ್ತಿನ ಗಾಡಿಗಳಲ್ಲಿ ಮತ್ತು ಭಕ್ತರು ತಲೆಹೊರೆಯಲ್ಲಿ ರಥಬೀದಿಗೆ ಮೆರವಣಿಗೆಯಲ್ಲಿ ತರಲಾಯಿತು. ಮಧ್ವಸರೋವರ ಈಶಾನ್ಯ ಭಾಗದ ನಿಗದಿತ ಸ್ಥಳದಲ್ಲಿ ನವಧಾನ್ಯ ದಾನ, ಪೂಜಾದಿಗಳನ್ನು ಸಲ್ಲಿಸಲಾಯಿತು.

ಹಾಲಿ ಪರ್ಯಾಯ ಪೀಠಾಧೀಶ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು, ಕಿರಿಯ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರು ಮತ್ತು ಭಾವಿ ಪರ್ಯಾಯ ಪೀಠಾಧೀಶ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ಜೊತೆಯಾಗಿ ಕಟ್ಟಿಗೆ ರಥ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಿದರು. ನಂತರ ಶಿರೂರು ಮಠದಲ್ಲಿ ಪರ್ಯಾಯ ಸ್ವಾಗತ ಸಮಿತಿ ಕಚೇರಿಯನ್ನು ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ಉದ್ಘಾಟಿಸಿದರು. 

 

Related Articles

error: Content is protected !!