Home » ‘ಶ್ರೀ ರಾಮನ ಆದರ್ಶ ಮೈಗೂಡಿಸಿಕೊಳ್ಳೋಣ
 

‘ಶ್ರೀ ರಾಮನ ಆದರ್ಶ ಮೈಗೂಡಿಸಿಕೊಳ್ಳೋಣ

ಡಾ. ನಿ.ಬೀ. ವಿಜಯ ಬಲ್ಲಾಳ್

by Kundapur Xpress
Spread the love

ಉಡುಪಿ : ಶತಮಾನಗಳ ಹೋರಾಟ, ತ್ಯಾಗ, ಬಲಿದಾನಗಳ ಫಲವಾಗಿ ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ನಿರ್ಮಾಣಗೊಂಡು ಬಾಲ ರಾಮನಿಗೆ ಪ್ರಾಣ ಪ್ರತಿಷ್ಠೆ ಆಗುವಂತಾಗಿದೆ. ಇದು ದೇಶದ ಶ್ರೇಯಸ್ಸಿನ ಸಂಕೇತವಾಗಿದೆ. ಶ್ರೀ ರಾಮೋತ್ಸವ ಒಂದು ದಿನಕ್ಕೆ ಸೀಮಿತವಾಗಿರದೆ ನಿತ್ಯ ನಿರಂತರ ಮನೆ ಮನಗಳಲ್ಲಿ ಶ್ರೀ ರಾಮನ ಆರಾಧನೆ ಮಾಡುವಂತಾಗಲಿ ಎಂದು ಅಂಬಲಪಾಡಿ ಶ್ರೀ ಜನಾರ್ಧನ ಮತ್ತು ಮಹಾಕಾಳಿ ದೇವಸ್ಥಾನದ ಧರ್ಮದರ್ಶಿ ಡಾ! ನಿ.ಬೀ. ವಿಜಯ ಬಲ್ಲಾಳ್ ಹೇಳಿದರು.

ಅವರು ಅಂಬಲಪಾಡಿ ಶ್ರೀ ಜನಾರ್ದನ ಮತ್ತು ಮಹಾಕಾಳಿ ದೇವಸ್ಥಾನದ ಆಶ್ರಯದಲ್ಲಿ ಶ್ರೀ ರಾಮೋತ್ಸವ ಸಮಿತಿ ಅಂಬಲಪಾಡಿ ಇದರ ಸಹಯೋಗದೊಂದಿಗೆ ಅಯೋಧ್ಯೆ ಶ್ರೀ ರಾಮ ಮಂದಿರದ ಲೋಕಾರ್ಪಣೆ ಮತ್ತು ಬಾಲ ರಾಮನ ಪ್ರಾಣ ಪ್ರತಿಷ್ಠೆಯ ಪ್ರಯುಕ್ತ ದೇವಳದ ಶ್ರೀ ಭವಾನಿ ಮಂಟಪದಲ್ಲಿ ನಡೆದ ‘ಶ್ರೀ ರಾಮೋತ್ಸವ’ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು

ಮರ್ಯಾದಾ ಪುರುಷೋತ್ತಮನಾಗಿ, ಒಳ್ಳೆಯ ಪ್ರಜಾ ಪಾಲಕನಾಗಿ, ಒಳ್ಳೆಯ ಪತಿ, ಒಳ್ಳೆಯ ಮಿತ್ರನಾಗಿ ಮಾದರಿ ರಾಜ್ಯಭಾರ ಮಾಡಿದ್ದ ಶ್ರೀ ರಾಮ ಸರ್ವಕಾಲಿಕ ಸತ್ಯನಾಗಿದ್ದಾನೆ. ಶ್ರೀ ರಾಮನ ಆದರ್ಶವನ್ನು ನಾವೆಲ್ಲರೂ ಮೈಗೂಡಿಸಿಕೊಳ್ಳೋಣ ಎಂದರು. ಅಯೋಧ್ಯಾ ಕರ ಸೇವಕ ಉಮೇಶ್ ಶೆಟ್ಟಿಗಾರ್ ಅಂಬಲಪಾಡಿ ಅವರನ್ನು ಸನ್ಮಾನಿಸಲಾಯಿತು.

ಶ್ರೀ ನಾಗರಾಜ ಮಹಿಳಾ ಭಜನಾ ಮಂಡಳಿ ಅಂಬಲಪಾಡಿ, ಶ್ರೀ ಪತಂಜಲಿ ಯೋಗ ಶಿಕ್ಷಣ ಕೇಂದ್ರ ಅಂಬಲಪಾಡಿ ಶಾಖೆ ತಂಡ, ಸಂಗೀತ ವಿದ್ವಾನ್ ಶ್ರೀಮತಿ ವಾರಿಜಾಕ್ಷಿ ಆರ್. ಭಟ್ ಅಂಬಲಪಾಡಿ ಇವರಿಂದ ಭಜನೆ, ಶ್ರೀ ಗುರು ಮಹಿಳಾ ಕುಣಿತ ಭಜನಾ ಮಂಡಳಿ ಅಂಬಲಪಾಡಿ ಇವರಿಂದ ಕುಣಿತ ಭಜನೆ, ಯೋಗ ಶಿಕ್ಷಕಿ ಶ್ರೀಮತಿ ಭವಾನಿ ಭಟ್ ಅಂಬಲಪಾಡಿ ಮತ್ತು ಸಂಗಡಿಗರಿಂದ ಹನುಮಾನ್ ಚಾಲೀಸಾ ಪಠಣ ಹಾಗೂ ಶ್ರೀಮತಿ ಮಂಗಳ ಅಂಬಲಪಾಡಿ ಮತ್ತು ತಂಡದಿಂದ ಶ್ರೀರಾಮ ರಕ್ಷಾ ಸ್ತೋತ್ರ ಪಠಣ ನಡೆಯಿತು.

ಆರ್ ಎಸ್ ಎಸ್ ಹಿರಿಯ ಸ್ವಯಂಸೇವಕ ಹಾಗೂ ನಿವೃತ್ತ ಬ್ಯಾಂಕ್, ಉದ್ಯೋಗಿ ಪಾಂಡುರಂಗ ಶ್ಯಾನುಭಾಗ್ ಅವರು ಅಯೋಧ್ಯಾ ರಾಮ ಜನ್ಮಭೂಮಿ ಹೋರಾಟ ಮತ್ತು ಶ್ರೀ ರಾಮ ಮಂದಿರ ನಿರ್ಮಾಣದ ಕುರಿತು ಬೌದ್ಧಿಕ್ ನಡೆಸಿಕೊಟ್ಟರು. ಅಯೋಧ್ಯೆಯ ಶ್ರೀರಾಮ ಮಂದಿರದ ಲೋಕಾರ್ಪಣೆ ಮತ್ತು ಬಾಲ ರಾಮನ ಪ್ರಾಣ ಪ್ರತಿಷ್ಠೆಯ ನೇರ ಪ್ರಸಾರವನ್ನು ಸಾಮೂಹಿಕವಾಗಿ ವೀಕ್ಷಿಸಲಾಯಿತು. ಮಹಾ ಪೂಜೆಯ ಬಳಿಕ ಸುಮಾರು 2,000ಕ್ಕೂ ಮಿಕ್ಕಿ ಭಕ್ತಾದಿಗಳು ಅನ್ನಪ್ರಸಾದವನ್ನು ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಸ್ಥಳೀಯ ನಗರಸಭಾ ಸದಸ್ಯ ಹರೀಶ್ ಶೆಟ್ಟಿ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಮುಖರಾದ ಗಣೇಶ್ ಶೆಣೈ, ರಮೇಶ್ ಹಾಗೂ ಸ್ಥಳೀಯ ಪ್ರಮುಖರಾದ ಯೋಗೀಶ್ ಶೆಟ್ಟಿ, ಶಿವಕುಮಾರ್ ಅಂಬಲಪಾಡಿ, ಜಗದೀಶ್ ಆಚಾರ್ಯ ಕಪ್ಪೆಟ್ಟು, ರಾಜೇಂದ್ರ ಪಂದುಬೆಟ್ಟು, ಹರೀಶ್ ಪಾಲನ್, ಹರೀಶ್ ಆಚಾರ್ಯ, ವಸಂತ ಪ್ರಭು, ಸುಧಾಕರ ಶೆಟ್ಟಿ, ಶರತ್ ಶೆಟ್ಟಿ, ಜಯ ಭಂಡಾರಿ, ರೋಹಿತ್ ಕೋಟ್ಯಾನ್, ರತ್ನಾಕರ ಶೇರಿಗಾರ್, ರಾಜೇಶ್, ರಮೇಶ್ ಭಟ್, ರಾಜೇಶ್ ಸುವರ್ಣ, ಮಹೇಂದ್ರ ಕೋಟ್ಯಾನ್, ಭುವನೇಂದ್ರ, ಶಿವರಾಮ್ ಸಹಿತ ಸ್ವಯಂ ಸೇವಕರು ಮತ್ತು ಗ್ರಾಮಸ್ಥರು ಸಾವಿರಾರು ಸಂಖ್ಯೆಯಲ್ಲಿ ಉಪಸ್ಥಿತರಿದ್ದರು

   

Related Articles

error: Content is protected !!