ಉಡುಪಿ : ಕಡೆಗೋಲು ಕೃಷ್ಣನ ನೆಲೆವೀಡು ಉಡುಪಿಯ ಶ್ರೀ ಕೃಷ್ಣಮಠದಲ್ಲಿ ಸೋಮವಾರ ಭಕ್ತಿ ಸಂಭ್ರಮದಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಿಸಲಾಯಿತು ಇಂದು ಮಂಗಳವಾರ ಕೃಷ್ಣನ ರಥದ ಬೀದಿಯಲ್ಲಿ ಲಕ್ಷಾಂತರ ಮಂದಿ ಭಾಗವಹಿಸುವ ಮೊಸರು ಕುಡಿಕೆ ಉತ್ಸವ ನಡೆಯಲಿದೆ
ಕೃಷ್ಣನ ಜನ್ಮಾಷ್ಟಮಿ ಪ್ರಯಕ್ತ ಕೃಷ್ಣ ಭಕ್ತರು ತಂತಮ್ಮ ಮನೆಗಳಲ್ಲಿ ದಿನವಿಡೀ ಉಪವಾಸವಿದ್ದು, ಕೃಷ್ಣನ ಭಜನೆ, ಪಾರಾಯಣಗಳನ್ನು ನಡೆಸಿದರು. ಕೃಷ್ಣಮಠದಲ್ಲಿ ಪರ್ಯಾಯ ಪುತ್ತಿಗೆ ಮಠಾಧೀಶರು ದಿನವಿಡೀ ಬಾಲಕೃಷ್ಣನಿಗೆ ವಿವಿಧ ಅಲಂಕಾರ, ಮಹಾಪೂಜೆ, ನೈವೇದ್ಯಗಳನ್ನು ನಡೆಸಿ, ಮಧ್ಯರಾತ್ರಿ ಅರ್ಘ್ಯ ಪ್ರದಾನ ಮಾಡುವುದರೊಂದಿಗೆ ಕೃಷ್ಣನ ಹುಟ್ಟುಹಬ್ಬದ ಆಚರಣೆ ಸಂಪ್ರದಾಯದಂತೆ ನೆರವೇರಿತು.
ಎಲ್ಲೆಲ್ಲೂ ಮುದ್ದುಕೃಷ್ಣರು:
ಸೋಮವಾರ ಉಡುಪಿಯ ಬೀದಿ ಬೀದಿಗಳಲ್ಲಿ ಕೃಷ್ಣನ ದರ್ಶನವಾಗುತಿತ್ತು. ತಾಯಂದಿರು ತಮ್ಮ ಮಕ್ಕಳಿಗೆ ಮುದ್ದುಕೃಷ್ಣನ ನಾನಾಬಗೆಯ ವೇಷಗಳನ್ನು ಹಾಕಿ ಕೃಷ್ಣಮಠಕ್ಕೆ ಕರೆ ತಂದಿದ್ದರು. ನಂತರ ರಾಜಾಂಗಣದಲ್ಲಿ ಪುಟಾಣಿ ಮಕ್ಕಳಿಗಾಗಿ ಮುದ್ದುಕೃಷ್ಣ ವೇಷ ಸ್ಪರ್ಧೆಯನ್ನು ನಡೆಸಲಾಗಿತ್ತು. ಅಲ್ಲಿಗೆ ಆಗಮಿಸಿದ ಪುತ್ತಿಗೆ ಶ್ರೀದ್ವಯರು ಕೃಷ್ಣವೇಷಧಾರಿ ಮಕ್ಕಳನ್ನು ಎತ್ತಿ ತೊಡೆಯ ಮೇಲೆ ಕುಳ್ಳಿರಿಸಿ ಸಂಭ್ರಮಿಸಿದರು.
ನಗರವಿಡೀ ತಾಸೆಯ ಸದ್ದು:
ಸೋಮವಾರ ಉಡುಪಿ ನಗರವಿಡೀ ತಾಸೆಯ ಸದ್ದು ಕೇಳುತ್ತಿತ್ತು. ತಾಸೆಯ ಸದ್ದಿನೊಂದಿಗೆ ಬೀದಿ ಬೀದಿಗಳಲ್ಲಿ ಹತ್ತಾರು ಹುಲಿವೇಷ ತಂಡಗಳು ಕುಣಿಯುತ್ತಿದ್ದವು. ಪ್ರಸಿದ್ದಮಾರ್ಪಳ್ಳಿ, ನಿಟ್ಟೂರು, ಕಾಡಬೆಟ್ಟು, ಕೊರಂಗ್ರಪಾಡಿ, ಮಲ್ಪೆ ಇತ್ಯಾದಿ ಹುಲಿವೇಷ ತಂಡಗಳು ಪೈಪೋಟಿಯಲ್ಲಿ ಬೀದಿಗಿಳಿದು ಅಬ್ಬರಿಸುತ್ತಿದ್ದವು. ಮಂಗಳವಾರ ಪುತ್ತಿಗೆ ಮಠದ ವತಿಯಿಂದ ರಾಜಾಂಗಣದಲ್ಲಿ ಮತ್ತು ಶಿರೂರು ಮಠದ ವತಿಯಿಂದ ರಥಬೀದಿಯಲ್ಲಿ ಹುಲಿವೇಷ ಕುಣಿತದ ರಸದೌತಣವಾಗಲಿದೆ.