ಕುಂದಾಪುರ:ಪ್ರಧಾನಿ ನರೇಂದ್ರ ಮೋದಿ ಹವಾ, ಶಾಸಕ ಹಾಲಾಡಿ ನೇತೃತ್ವ, ಸಜ್ಜನ ಕಿರಣ್ ಕುಮಾರ್ ಕೊಡ್ಗಿ ಉಮೇದುದಾರಿಕೆಯಿಂದ ಈ ಬಾರಿ ಬಿಜೆಪಿ ಮೇಲುಗೈ ಸಾಧಿಸಲಿದೆ. ಮೂವತ್ತು-ಮೂವತ್ತೈದು ಸಾವಿರ ಮತ ಅಂತರದಲ್ಲಿ ಕೊಡ್ಗಿ ಜಯ ಗಳಿಸಲಿದ್ದಾರೆ ಎಂದು ಪುರಸಭೆ ಅಧ್ಯಕ್ಷೆ ವೀಣಾ ಭಾಸ್ಕರ ಮೆಂಡನ್ ನಗರದಲ್ಲಿ ಸೋಮವಾರ ಬಿಜೆಪಿ ಪರ ಮತಯಾಚನೆ ನಡೆಸಿ ಸುದ್ಧಿಗಾರರೊಂದಿಗೆ ಮಾತನಾಡಿದರು. ಮೋದಿ ಕುಂದಾಪುರಕ್ಕೆ ಬರದಿದ್ದರೂ ಅಲ್ಲಲ್ಲಿ ನಡೆದ ರೋಡ್ ಶೋ, ಸೇರಿದ ಜನಸ್ತೋಮ ಕುಂದಾಪುರ ಮತದಾರರ ಮೇಲೆ ಪರಿಣಾಮ ಬೀರಿರುವುದು ಖಂಡಿತ. ಹಾಗೆಯೇ ಶಾಸಕ ಹಾಲಾಡಿ ಅವರ ಅಭಿವೃದ್ಧಿ ಕೆಲಸ ಬಿಜೆಪಿಗೆ ವರದಾನವಾಗಲಿದೆ. ಪ್ರಚಾರ ನಿಮಿತ್ತ ವಿವಿಧೆಡೆ ಹೋದ ಸಂದರ್ಭ ಗಮನಿಸಿದ ಅಂಶ ಎಂದರೆ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು, ಯುವಕರು ಸೇರುತ್ತಿರುವುದು. ಇವರೆಲ್ಲ ಬಿಜೆಪಿ ಬೆಂಬಲಕ್ಕೆ ನಿಂತಿರುವುದರಿಂದ ಕುಂದಾಪುರದಲ್ಲಿ ಮತ್ತೊಮ್ಮೆ ಕಮಲ ಅರಳಲು ಸಹಕಾರಿಯಾಗಲಿದೆ ಎಂದರು.