ಮಂಗಳೂರು : ಸುರತ್ಕಲ್ ಗೋವಿಂದದಾಸ ಕಾಲೇಜಿನಲ್ಲಿ ಏ.7 ರಿಂದ 10 ರ ತನಕ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಅಂತರ ಕಾಲೇಜು ಯಕ್ಷಗಾನ ಸ್ಪರ್ಧೆ ನಡೆಯಲಿದೆ. ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಕೃಷ್ಣಮೂರ್ತಿ ಸುದ್ಧಿ ಗೋಷ್ಠಿಯಲ್ಲಿ ಮಾತನಾಡಿ, ಅಂತರ ಕಾಲೇಜು ಯಕ್ಷಗಾನ ಸ್ಪರ್ಧೆಯನ್ನು ಕಳೆದ ನಾಲ್ಕು ವರ್ಷಗಳಿಂದ ನಡೆಸಿಕೊಂಡು ಬರಲಾಗುತ್ತಿದೆ. ಈ ಸಲ ಬಡಗುತಿಟ್ಟು ಯಕ್ಷಗಾನ ಸ್ಪರ್ಧೆಯೂ ಸೇರ್ಪಡೆಯಾಗಿದೆ ಎಂದರು.
ಸ್ಪರ್ಧೆಯಲ್ಲಿ ಮಂಗಳೂರು ವಿ.ವಿ. ವ್ಯಾಪ್ತಿಯ 18 ಕಾಲೇಜುಗಳ ತಂಡಗಳು ಭಾಗವಹಿಸಲಿವೆ. ಇವುಗಳ ಪೈಕಿ ನಾಲ್ಕು ತಂಡಗಳು ಬಡಗು ತಿಟ್ಟಿಗೆ ಸೇರಿವೆ. ಮಿಕ್ಕುಳಿದ 14 ತಂಡಗಳು ತೆಂಕು ತಿಟ್ಟಿನವು. ಸ್ಪರ್ಧೆ ಕಾಲೇಜು ಆವರಣದ ಯಕ್ಷ ಕೇಸರಿ ಅಗರಿ ರಘುರಾಮ ಭಾಗವತ ವೇದಿಕೆಯಲ್ಲಿ ನಡೆಯಲಿದೆ ಎಂದರು.
7 ರ ಪೂರ್ವಾಹ್ನ 9 ಗಂಟೆಗೆ ಯಕ್ಷಗಾನ ಸ್ಪರ್ಧೆಯ ಉದ್ಘಾಟನೆಯನ್ನು ಇಡ್ಯಾ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆನುವಂಶಿಕ ಮೊಕ್ತೇಸರ ಐ., ರಮಾನಂದ ಭಟ್ ನೆರವೇರಿಸುವರು. ಅಗರಿ ಎಂಟರ್‍ಪ್ರೈಸಸ್ ಮಾಲಕ ಅಗರಿ ರಾಘವೇಂದ್ರ ರಾವ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಹಿಂದೂ ವಿದ್ಯಾದಾಯಿನಿ ಸಂಘದ ಅಧ್ಯಕ್ಷರಾದ ಜಯಚಂದ್ರ ಹತ್ವಾರ್ ಎಚ್.ರವರು ಅಧ್ಯಕ್ಷತೆ ವಹಿಸುವರು ಎಂದು ಪಾಂಶುಪಾಲರು ನುಡಿದರು