Home » ಬದುಕಿನ ಉದ್ದೇಶ
 

ಬದುಕಿನ ಉದ್ದೇಶ

by Kundapur Xpress
Spread the love
  1. ಬದುಕಿನ ಉದ್ದೇಶ

ಬದುಕಿನಲ್ಲಿ ನಾವು ಏನೇನ್ನೆಲ್ಲ ಪಡೆಯುವೆವೋ, ಅನುಭವಿಸುವೆವೂ ಅವೆಲ್ಲವೂ ನಮ್ಮ ಕರ್ಮದ ಫಲ ಎಂಬುದು ಸತ್ಯ. ತಿಳಿದೋ ತಿಳಿಯದೆಯೋ ಮಾಡಿದ ಸತ್ಕರ್ಮ ಹಾಗೂ ದುಷ್ಕರ್ಮಗಳ ಫಲವನ್ನಷ್ಟೇ ನಾವು ಉಣ್ಣುವೆವು. ಹಾಗಿರುವಾಗ ದೇವರನ್ನು ಕಾಡಿಸಿ ಪೀಡಿಸಿ ಬೇಡಿ ಪಡೆಯುತ್ತೇವೆ ಎಂಬ ಮಾತಿಗೆ ಏನು ಅರ್ಥ? ಫಲಾಪೇಕ್ಷೆಯಿಂದ ದೇವರನ್ನು ಭಜಿಸಿದ್ದೇ ಆದಲ್ಲಿ ಅದು ಕೂಡ ಸಕಾಮ ಕರ್ಮವೇ ಎನಿಸಿಕೊಳ್ಳುತ್ತದೆ. ಆದುದರಿಂದ ನಾವು ಬದುಕಿನಲ್ಲಿ ಕೈಗೊಳ್ಳುವ ಸಮಸ್ತ ಕಾಯಕಕ್ಕೆ ಅದರದ್ದೇ ಆದ ಫಲವಿದೆ. ಅದು ಒಳ್ಳೆಯ ಫಲ ಇರಬಹುದು; ಕೆಟ್ಟ ಫಲವೂ ಇರಬಹುದು. ಆದರೆ ಅದಕ್ಕೆಲ್ಲ ನಾವೇ ಕಾರಣ ವಿನಾ ನಾವು ನಂಬಿದ ದೇವರಲ್ಲ; ವಿಧಿಯೂ ಅಲ್ಲ. ಇದನ್ನು ತಿಳಿಯದೆ ನಾವು ಎಲ್ಲದಕ್ಕೂ ದೇವರನ್ನು ದೂಷಿಸುತ್ತೇವೆ; ನಿಂದಿಸುತ್ತೇವೆ. ಆತನೊಡನೆ ಕೊಟ್ಟುತೆಗೆದುಕೊಳ್ಳುವ ವ್ಯಾಪಾರಕ್ಕೂ ಮುಂದಾಗುತ್ತೇವೆ. ಮನುಷ್ಯ ಜನ್ಮ ಅತ್ಯಂತ ಶ್ರೇಷ್ಠವಾದುದು ಎಂಬ ಸತ್ಯವನ್ನು ಕೂಡ ನಾವು ತಿಳಿಯುವ ಪ್ರಯತ್ನ ಮಾಡುವುದಿಲ್ಲ. ದೇವರು ಹಾಗೂ ಆತನ ಸೃಷ್ಟಿಯ ಕುರಿತಾಗಿ, ಮೋಕ್ಷದ ಕುರಿತಾಗಿ ಚಿಂತಿಸಬಲ್ಲ ವಿವೇಕ ಹಾಗೂ ಯೋಚನಾಶಕ್ತಿ ಮನುಷ್ಯನಿಗೆ ಬಿಟ್ಟರೆ ಜೀವ ಸಂಕುಲದಲ್ಲಿ ಇನ್ಯಾರಿಗೆ ತಾನೇ ಇದೆ? ನಿಜ ನೋಡಹೋದರೆ ನಮ್ಮೆಲ್ಲರನ್ನು ದೇವರು ತನ್ನ ಪ್ರತಿನಿಧಿಯಾಗಿಯೇ ಇಲ್ಲಿ ಸೃಷ್ಟಿಸಿದ್ದಾನೆ. ಆತನ ಲೀಲೆಯನ್ನು ಕಾಣಲೆಂದು ಮಾತ್ರವಲ್ಲ ಆತನೇ ನಡೆಸಬೇಕಾದ ಸತ್ಕರ್ಮಗಳನ್ನು ನಾವು ಕೈಗೊಳ್ಳಬೇಕೆಂದು. ಅಂತಿರುವಾಗ ಭೂಮಿಯಲ್ಲಿ ನಾವು ಯಾವತ್ತೂ ಮಾಡಬೇಕಾದ ಕೆಲಸಗಳು ಯಾವುವು? ದುಷ್ಕರ್ಮಗಳನ್ನಲ್ಲ, ಸತ್ಕರ್ಮಗಳನ್ನು; ಸಂಪತ್ತನ್ನು ಕ್ರೋಡೀಕರಿಸುವುದಲ್ಲ; ಇಲ್ಲದವರೊಡನೆ ಅದನ್ನು ಹಂಚಿಕೊಳ್ಳುವುದು; ಭೋಗ ಜೀವನವನ್ನು ನಡೆಸುವುದಲ್ಲ, ತ್ಯಾಗ ಜೀವನವನ್ನು ನಡೆಸುವುದು.

   

Related Articles

error: Content is protected !!