- ಬದುಕಿನ ಮುನ್ನೋಟ
ಕನಸುಗಳನ್ನು ಕಾಣುವುದು ತಪ್ಪೇ? ಉತ್ತರ: ಹೌದು ಮತ್ತು ಅಲ್ಲ! ಒಂದು ದೃಷ್ಟಿಯಲ್ಲಿ ಕನಸುಗಳನ್ನು ಕಾಣುವುದು ಸರಿ. ಯಾಕೆಂದರೆ ಎಲ್ಲ ಮಹತ್ಸಾಧನೆಗಳ ಹಿಂದೆ ಇರುವಂತಹದ್ದು ಯೋಗ್ಯವಾದ ಮುನ್ನೋಟವಲ್ಲದೆ ಬೇರೇನೂ ಅಲ್ಲ. ಈ ಮುನ್ನೋಟವೆಂದರೆ ಸಾಧನೆ ಪಥದಲ್ಲಿ ಸಾಗುವ ಮೂಲಕ ತಲುಪಬೇಕಾದ ಗುರಿಯನ್ನು ಮುಂಚಿತವಾಗಿಯೇ ನಿಖರವಾಗಿ ಕಾಣುವ ಪರಿ. ಇನ್ನೊಂದು ದೃಷ್ಟಿಯಲ್ಲಿ ಕನಸು ಕಾಣುವುದು ತಪ್ಪು. ಯಾಕೆಂದರೆ ನಮಗೆ ರಮ್ಯವೆನಿಸುವ ಕನಸ್ಸನ್ನು ಕಾಣುತ್ತಾ ಅದರಲ್ಲೇ ಮೈಮರೆಯುವ ಅಪಾಯ ಇದೆ ಎನ್ನುವುದು. ಮನಸ್ಸು ಯಾವತ್ತೂ ಭವಿಷ್ಯವನ್ನು ತುಂಬ ರಮ್ಯವಾಗಿಯೂ ಲಾಭಕರವಾಗಿಯೂ ಚಿತ್ರಿಸುವ ಅದ್ಭುತ ಕಲಾವಿದ ಆ ಕಲಾವಿದನ ಮೋಡಿಗೆ ಮರುಳಾಗಿ ಬಿಟ್ಟರೆ ಕನಸ್ಸಿನಲ್ಲಿ ಕಂಡದ್ದೆಲ್ಲ ಕನ್ನಡಿಯೊಳಗಿನ ಗಂಟಾಗಿ ಉಳಿಯುವ ದುರಂತವೇ ಹೆಚ್ಚು. ಬದುಕಿನ ಉನ್ನತಿಯನ್ನು ಸಾಧಿಸಲು ಬೇಕಾಗಿರುವುದು ಮುನ್ನೋಟ ಮಾತ್ರವಲ್ಲ, ಕಂಠಿನ ಪರಿಶ್ರಮವೂ ಹೌದು. ವಿಶ್ವವಿಖ್ಯಾತ ಕಲಾವಿದ ಲಿಯೋನಾರ್ಡೋಡ ವಿಂಚಿ ಇದನ್ನು ಅತ್ಯಂತ ಸ್ಪಷ್ಟ ಮಾತುಗಳಲ್ಲಿ ಹೇಳುವುದು ಹೀಗೆ ಪ್ರಯತ್ನದ ಬೆಲೆಯನ್ನು ತೆತ್ತಾಗ ದೇವರು ಬೇಡಿಕೊಂಡದ್ದನ್ನೆಲ್ಲ ಅನುಗ್ರಹಿಸುತ್ತಾನೆ ಸಾಧಕರಿಗೂ ಸಾಮಾನ್ಯರಿಗೂ ಇರುವ ವ್ಯತ್ಯಾಸ ಏನೆಂಬುದು ಈಗ ಸ್ಪಷ್ಟವಾಯಿತು. ಸಾಧಕರು ಕಾಣುವ ಕನಸು ಕನಸ್ಸಲ್ಲ, ಮುನ್ನೋಟ. ಅದನ್ನು ಅನುಸರಿಸಿ ಅವರು ನಡೆಸುವುದು ಕಠಿನ ಪ್ರಯತ್ನ ಮತ್ತು ಪರಿಶ್ರಮ ಇವೆರಡೂ ಇಲ್ಲದೆ ಕಾಣುವ ಕನಸು ಕೇವಲ ಮೈಮರೆಯುವ ನಿಷ್ಪ್ರಯೋಜಕ ಹಗಲುಗನಸು.