Home » ಕೆಟ್ಟ ಮೇಲೆ ಬುದ್ಧಿ….
 

ಕೆಟ್ಟ ಮೇಲೆ ಬುದ್ಧಿ….

by Kundapur Xpress
Spread the love

ಕೆಟ್ಟ ಮೇಲೆ ಬುದ್ಧಿ ಬಂತು’ ಎನ್ನುವ ಗಾದೆ ಮಾತೊಂದಿದೆ. ಒಳ್ಳೆಯ ಗುಣಗಳು ಬರಬೇಕಾದರೆ ಮೊದಲು ಕೆಟ್ಟ ಗುಣಗಳಿಂದ ಜೀವನದಲ್ಲಿ ಸ್ವಲ್ಪ ಅನರ್ಥ ಸಂಭವಿಸಬೇಕಾಗುತ್ತದೆ! ಆಗ ಸಹಜವಾಗಿಯೇ ಕಷ್ಟಗಳ ಪರಿಚಯ ಉಂಟಾಗುತ್ತದೆ. ಬದುಕಿನ ಸುಖ-ಸಂತೋಷಗಳು ಮಾಯವಾಗುತ್ತವೆ. ನೋವು, ದುಃಖ, ಹತಾಶೆ, ಜುಗುಪ್ಸೆ ಕಾಡಲು ತೊಡಗುತ್ತವೆ. ದುರ್ಗುಣಗಳಿಂದ ಹೀಗೆ ಬದುಕು ದುರ್ಭಲವಾಗಲು ತೊಡಗಿದಾಗಲೇ ಸದ್ಗುಣಗಳ ಮಹತ್ವ ತಿಳಿಯುತ್ತದೆ. ಆರೋಗ್ಯದ ಮಹತ್ವ ಕೂಡ ಹಾಗೆಯೇ. ಅನಾರೋಗ್ಯ ಉಂಟಾದಾಗಲೇ ಆರೋಗ್ಯದ ಭಾಗ್ಯ ಎಷ್ಟೊಂದು ಆನಂದಕರ ಎಂಬ ಅರಿವು ಮೂಡುತ್ತದೆ. ಆದರೆ ಮನುಷ್ಯನ ಸ್ವಭಾವವೆಂದರೆ ಬದುಕಿನಲ್ಲಿ ಎಲ್ಲವೂ ಇರುವಾಗ ಅದರ ಮಹತ್ವವನ್ನೂ ಮೌಲ್ಯವನ್ನೂ ಅರಿಯದೆ ದುಡುಕುವುದು. ಯಾವೆಲ್ಲ ಬಗೆಯ ಸುಖ-ಸಂತೋಷ, ಸಂಪತ್ತು ಲಭಿಸಿವೆಯೋ ಅವನ್ನೆಲ್ಲ ದುರುಪಯೋಗಿಸುವುದು, ವಿವೇಚನೆ ಇಲ್ಲದೆ ಮಿತಿಮೀರಿ ಬಳಸುವುದು. ‘ಇರುವಾಗ ಭರ್‍ಪೂರ್ ಗಮ್ಮತ್ ಮಾಡಬೇಕು, ಎಂಜಾಯ್ ಮಾಡಬೇಕು’ ಎಂಬ ಧೋರಣೆ ನಮ್ಮದು. ಆದರೆ ಹಾಗೆ ಮಾಡುವ ಮೂಲಕ ನಾವು ನಿಜಕ್ಕೂ ಬದುಕಿನಲ್ಲಿ ದುಡುಕುವುದು ಮತ್ತು ಎಡುವುದಲ್ಲದೆ ಬೇರೇನೂ ಮಾಡುವುದಿಲ್ಲ. ವಿವೇಚನೆಯನ್ನು ಕಳೆದುಕೊಂಡರೆ ದೇವರು ಅನುಗ್ರಹಿಸಿರುವ ಸಕಲ ಸೌಭಾಗ್ಯಗಳು ‘ಮಂಗನ ಕೈಯಲ್ಲಿ ಮಾಣಿಕ್ಯ ಇರುವ ಹಾಗೆ’ ಎಂಬಂತಾಗುತ್ತವೆ. ಬದುಕಿನ ಸಮಸ್ತ ಸುಖ ಸಾಧನಗಳು ಇರುವುದು ಹಿತಮಿತವಾಗಿ ಬಳಕೆಗೇ ವಿನಾ ವಿವೇಚನಾರಹಿತವಾಗಿ ಮತ್ತು ಸ್ವಾರ್ಥಪರವಾಗಿ ಅವುಗಳನ್ನು ಬಳಸುವುದರಲ್ಲಿ ಅಲ್ಲ. ಹಾಗೆ ಮಾಡಿದ್ದೇ ಆದಲ್ಲಿ ಬದುಕೇ ನಮಗೆ ಮರೆಯಲಾರದ ಪಾಠವನ್ನು ಕಲಿಸುತ್ತದೆ. ‘ಕೆಟ್ಟ ಮೇಲೆ ಬುದ್ಧಿ ಬಂತು’ ಎಂಬ ಮಾತಿನ ಹಿಂದೆ ಇರುವ ಸತ್ಯ ಇದೇ ಆಗಿದೆ. ಬದುಕಿನಲ್ಲಿ ವಿವೇಚನೆ ಇಲ್ಲದೆ ಎಡವಿದಾಗ ಬದುಕೇ ನಮಗೆ ಕಲಿಸುವ ಪಾಠ ಬಹಳ ದೊಡ್ಡದು. ಆ ಪಾಠದಿಂದ ಕಲಿಯದೇ ಹೋದಾಗ ಬದುಕು ಇನ್ನಷ್ಟು ದುರಂತಮಯ.

 

   

Related Articles

error: Content is protected !!