ತ್ಯಾಗದ ಮೂರನೇ ಮಜಲಿನಲ್ಲಿ ನಾವು ಮಾಡಬೇಕಾದದ್ದು ಅನಿತ್ಯವಾದ ವಸ್ತುಗಳು ಮತ್ತು ವಿಷಯಗಳ ಮೇಲಿನ ಮೋಹವನ್ನು ತ್ಯಜಿಸುವುದು. ಪ್ರಾಪಂಚಿಕ ಬದುಕಿನ ಪ್ರಾಪ್ತಿಗಳೆಲ್ಲವೂ ಅನಿತ್ಯವಾದದ್ದು ಎಂಬ ಸತ್ಯವನ್ನು ನಾವು ಮೊತ್ತಮೊದಲಾಗಿ ತಿಳಿಯುವುದು ಅಗತ್ಯ. ಐಹಿಕ ಜಗತ್ತಿನಲ್ಲಿ ನಾವು ಸಾಮಾನ್ಯವಾಗಿ ಐಶ್ವರ್ಯ, ಸಂಪತ್ತು, ಧನ-ಕನಕ, ಅಧಿಕಾರ, ಅಂತಸ್ತು, ಕೀರ್ತಿ, ಗೌರವ, ಹೊಗಳಿಕೆ, ಹೆಂಡತಿ, ಮಕ್ಕಳು ಮುಂತಾಗಿ ಎಲ್ಲ ಬಗೆಯ ಪ್ರಾಪ್ತಿಗಳನ್ನು ಅತೀವವಾಗಿ ಮೋಹಿಸುತ್ತೇವೆ. ಅವು ದೊರೆತಷ್ಟು ಸಾಲದೆ ಮತ್ತಷ್ಟು ಬೇಕು ಎಂಬ ಆಸೆಯನ್ನು ಹೆಚ್ಚಿಸಿಕೊಳ್ಳುತ್ತಲೇ ಇರುತ್ತೇವೆ. ಆಸೆ ಕೈಗೂಡದಿದ್ದಾಗ ಸಿಟ್ಟು, ಅಸಹನೆ, ಕೋಪ, ತಾಪ, ದ್ವೇಷ, ರೋಷವನ್ನು ಮೆರೆಯುತ್ತೇವೆ. ಪರಿಣಾಮವಾಗಿ ದೈಹಿಕವಾಗಿ, ಮಾನಸಿಕವಾಗಿ, ಬೌದ್ಧಿಕವಾಗಿ ಕುಗ್ಗುತ್ತೇವೆ. ದೇಹವನ್ನು ನಾನಾ ತರದ ರೋಗ-ರುಜಿನಗಳಿಗೆ ಗುರಿಪಡಿಸುತ್ತೇವೆ. ಆದರೆ ಐಹಿಕ ಪ್ರಾಪ್ತಿಗಳೆಲ್ಲವೂ ಪ್ರಾರಬ್ಧಕ್ಕೆ ಅನುಸಾರವಾಗಿ ದೊರಕುವಂತಹವುಗಳು ಎಂಬ ಸತ್ಯವನ್ನು ತಿಳಿಯುವ ಗೋಜಿಗೆ ಮಾತ್ರ ನಾವು ಹೋಗುವುದಿಲ್ಲ. ಮಾತ್ರವಲ್ಲ ಈ ಎಲ್ಲ ಬಗೆಯ ಪ್ರಾಪ್ತಿಗಳು ಅನಿತ್ಯವಾದವುಗಳು. ಅನಿತ್ಯವೆಂದರೆ ಇಂದು ನಮ್ಮಲ್ಲಿ ಇದ್ದು ನಾಳೆ ಇಲ್ಲವಾಗುವಂತಹವುಗಳು ಹೀಗಿದ್ದರೂ ಅವು ಶಾಶ್ವತವಾಗಿ ನಮ್ಮಲ್ಲಿ ಉಳಿಯುವಂತಹವುಗಳು ಎಂಬ ಭ್ರಮೆಯನ್ನು ನಮ್ಮಲ್ಲಿ ಸೃಷ್ಟಿಮಾಡುತ್ತವೆ. ನಿಜಕ್ಕಾದರೆ ನಾವು ಮೋಸ ಹೋಗುವುದು ಇಲ್ಲೇ. ನಮ್ಮಲ್ಲಿ ಲೋಭ, ಮೋಹವನ್ನು ಉಂಟು ಮಾಡುವ ಈ ಅನಿತ್ಯ ವಸ್ತುಗಳು ನಮ್ಮನ್ನು ಐಹಿಕ ಪ್ರಪಂಚಕ್ಕೆ ಬಿಗಿಯಾಗಿ ಬಂಧಿಸುತ್ತವೆ. ನಮ್ಮ ಸುಖ-ಸಂತೋಷಕ್ಕೆ ಬೇಕಾದವುಗಳೆಲ್ಲವೂ ಈ ಐಹಿಕ ಪ್ರಪಂಚದಲ್ಲೇ ಇವೆ ಎಂಬ ತಪ್ಪು ಸಂದೇಶವನ್ನೂ ಅವು ಕೊಡುತ್ತವೆ. ಪರಿಣಾಮವಾಗಿ ನಮ್ಮನ್ನು ನಿರಂತರ ದುಃಖಕ್ಕೆ ಗುರಿಮಾಡುತ್ತವೆ. ದೇವರ ಸ್ಮರಣೆಗೆ ತೊಡಕನ್ನು ಉಂಟುಮಾಡುತ್ತವೆ