Home » ಸಂದೇಹದ ಸುಳಿ
 

ಸಂದೇಹದ ಸುಳಿ

by Kundapur Xpress
Spread the love

ಸಂದೇಹವೆಂಬುದು ನಮ್ಮೊಳಗಿನ ದೊಡ್ಡ ವೈರಿ. ಅದು ಅಹಂಕಾರದೊಡನೆ ಸೇರಿದಾಗ ನಮ್ಮನ್ನು ಅತೀವವಾಗಿ ದುರ್ಬಲಗೊಳಿಸುತ್ತದೆ. ಅಹಂಕಾರವು ನಮ್ಮಲ್ಲಿ ತೀವ್ರಗೊಂಡಂತೆ ನಾವು ಮೃಗೀಯ ಮಟ್ಟದಲ್ಲಿ ಉಳಿದುಬಿಡುತ್ತೇವೆ. ದೈಹಿಕ ಅಸ್ತಿತ್ವವೇ ಪ್ರಧಾನವಾಗುತ್ತದೆ. ಭೌತಿಕ ಪ್ರಪಂಚದ ವಿನಾ ಬೇರೆ ಯಾವುದನ್ನೂ ನಂಬದ ಮನೋಭಾವವನ್ನು ಹೊಂದಿರುತ್ತೇವೆ. ದೇವರ ಅಸ್ತಿತ್ವದಲ್ಲಿ ನಮಗೆ ಸಂದೇಹವಿರಲು ಕೂಡ ಇದೇ ಕಾರಣ. ಮಾಯೆಯ ಪ್ರಭಾವಕ್ಕೆ ಗುರಿಯಾಗಿರುವ ನಾವು ಐಹಿಕ ಪ್ರಪಂಚದಲ್ಲಿ ಐಶ್ವರ್ಯ ಅಧಿಕಾರ, ಅಂತಸ್ತು ಹಾಗೂ ಕೀರ್ತಿಯನ್ನು ತೀವ್ರವಾಗಿ ಬಯಸುತ್ತಲೇ ಇರುವುದರಿಂದ ಮತ್ತು ಅದಕ್ಕಾಗಿ ಪಡಬಾರದ ಪಾಡನ್ನು ಅನುಭವಿಸಲು ಮುಂದಾಗುವುದರಿಂದ ಆತ್ಮನನ್ನು ನಮ್ಮಲ್ಲಿನ ಅಜ್ಞಾನವು ಮುಸುಕಿಕೊಳ್ಳುತ್ತದೆ. ಆತ್ಮನಿಂದ ನಮ್ಮನ್ನು ನಾವು ಪ್ರತ್ಯೇಕವಾಗಿ ದೇಹರೂಪದಲ್ಲಿ ನಮ್ಮ ಅಸ್ತಿತ್ವವನ್ನು ಕಾಣುವುದರಿಂದಲೇ ನಾವು ಬಾಹ್ಯಜಗತ್ತಿಗೆ ಅಂಟಿಕೊಂಡಿದ್ದೇವೆ. ಹೊರ ಜಗತ್ತಿನ ಸಮಸ್ತ ಅನಿತ್ಯ ವಸ್ತುಗಳನ್ನು ಶಾಶ್ವತವೆಂಬ ಭ್ರಮೆಯಲ್ಲಿ ಪ್ರೀತಿಸುತ್ತಿದ್ದೇವೆ. ಐಹಿಕ ಜಗತ್ತಿನೊಂದಿಗಿನ ನಮ್ಮ ನಂಟು ಎಷ್ಟು ಕಾಲ ಹೀಗೆ ಮುಂದುವರಿಯುವುದೋ ಅಷ್ಟು ಕಾಲ ನಮಗೆ ‘ಪುನರಪಿ ಜನನಂ ಪುನರಪಿ ಮರಣಂ’ ತಪ್ಪಿದ್ದಲ್ಲ. ಹುಟ್ಟು-ಸಾವಿನ ಚಕ್ರದಿಂದ ಪಾರಾಗುವ ಮಾತೇ ಇಲ್ಲ. ಗೀತೆಯಲ್ಲಿ ಶ್ರೀಕೃಷ್ಣನು ಅರ್ಜುನನಿಗೆ ಆತ್ಮಜ್ಞಾನದ ಮಹತ್ವವನ್ನು ತಿಳಿಸುವಲ್ಲಿ ನಮ್ಮೊಳಗಿನ ಎಲ್ಲ ಸಂಶಯವನ್ನೂ ಅಹಂಕಾರವನ್ನೂ ಸಂಪೂರ್ಣವಾಗಿ ಬೇರುಸಹಿತ ಕಿತ್ತು ಹಾಕಬಲ್ಲ ಸಾಟಿಯಿಲ್ಲದ ಈ ಪರಮ ಜ್ಞಾನವು ಮೋಕ್ಷವನ್ನು ದೊರಕಿಸುವ ಪರಿಶುದ್ಧ ಜ್ಞಾನವಾಗಿದೆ ಎಂಬುದು ಸ್ಪಷ್ಟವಿದೆ. ಯಾರ ಸಂಶಯಗಳೆಲ್ಲ ಜ್ಞಾನದ ಮೂಲಕ ನಾಶವಾಗಿ ಹೋಗುವುವೋ ಅಂತಹವರನ್ನು ಕರ್ಮಗಳು ಬಂಧಿಸಲಾರವು ಎಂಬ ಭರವಸೆಯಲ್ಲಿ ದೇವರ ಸಾನ್ನಿಧ್ಯವನ್ನು ಗಳಿಸುವ ಮಾರ್ಗೋಪಾಯವಿದೆ. ಯಾವಾಗ ನಮ್ಮೆಲ್ಲ ಕರ್ಮಗಳ ಕರ್ತೃ ನಾವೇ ಎಂಬ ಭ್ರಮೆ ನಮ್ಮಲ್ಲಿ ನಾಶವಾಗಿ ಅಹಂಕಾರವು ಅಳಿದು ಹೋಗುವುದೋ ಆಗಲೇ ನಾವು ದೇವರಿಗೆ ಹತ್ತಿರವಾಗುವೆವು.

   

Related Articles

error: Content is protected !!