ದೇಹದ ಮೂಲಕವೇ ನಮ್ಮ ಐಡೆಂಟಿಟಿಯನ್ನು ನಾವು ಕಂಡುಕೊಳ್ಳುವುದರಿಂದ ನಮ್ಮಲ್ಲಿ ಯಾವಾಗಲೂ ತರತಮದ ಭಾವವೇ ವಿಜೃಂಭಿಸುತ್ತಿರುತ್ತದೆ. ಮೇಲು-ಕೀಳು, ಬಡವ-ಬಲ್ಲಿದ, ಪಂಡಿತ-ಗಮಾರ ಎಂಬೆಲ್ಲ ಭೇದಗಳು ನಮ್ಮಲ್ಲಿ ಮಡುಗಟ್ಟಿರಲು ಮುಖ್ಯಕಾರಣವೇ ನಮ್ಮನ್ನು ನಾವು ದೇಹದ ಮೂಲಕ ಗುರುತಿಸಿಕೊಳ್ಳುವುದು. ಅಲ್ಲಿಯೇ ನಮ್ಮ ಅಹಮಿಕೆಯ ಮೂಲ ಅಡಗಿದೆ. ನಮಗೆ ಸಮಾಜದಲ್ಲಿ ಗಣ್ಯರಿಂದ, ಹಿತೈಷಿಗಳಿಂದ, ಬಂಧುಗಳಿಂದ, ಸ್ನೇಹಿತರಿಂದ ಸಲ್ಲುವ ಪ್ರೀತಿ, ಗೌರವಾದರಗಳನ್ನು ನಾವು ದೇಹಾಭಿಮಾನದ ನೆಲೆಯಲ್ಲಿ ಸ್ವೀಕರಿಸುವುದರಿಂದ ನಮ್ಮ ದೈಹಿಕ ಅಸ್ತಿತ್ವದ ಬಗ್ಗೆ ನಾವು ವಿಶೇಷವಾದ ಪ್ರಜ್ಞೆಯನ್ನು ಹೊಂದಿರುತ್ತೇವೆ. ಇಂಗ್ಲಿಷಿನಲ್ಲಿ ಅದನ್ನು ಇಗೋಯಿಸಂ ಎಂದು ಹೇಳುತ್ತಾರೆ. ಆತ್ಮನ ಮೂಲಕ ನಮ್ಮ ಅಸ್ಮಿತೆಯನ್ನು ಅರಿಯಲು ಪ್ರಯತ್ನಿಸಿದಾಗ ನಾವು ನಮ್ಮೆಲ್ಲ ಅಹಂಭಾವಗಳನ್ನು ಕಳಚಿ ಕೊಳ್ಳಲು ಸಾಧ್ಯವಾಗುತ್ತದೆ. ದೇಹದೊಳಗೆ ಚೈತನ್ಯ ರೂಪಿಯಾಗಿ ಆತ್ಮನು ವಿಜೃಂಭಿಸುತ್ತಿರುವುದರಿಂದಲೇ ದೇಹವು ಸಕ್ರಿಯವಾಗಿದೆ ಎನ್ನುವುದನ್ನು ನಾವು ಮರೆಯುತ್ತೇವೆ. ಎಷ್ಟು ಕಾಲ ನಮ್ಮ ದೇಹವನ್ನೇ ನಾವೆಂದು ಬಗೆಯುವೆವೋ ಅಷ್ಟು ಕಾಲವೂ ನಾವು ಅಜ್ಞಾನಿಗಳಾಗಿಯೇ ಉಳಿಯುತ್ತೇವೆ. ಅಜ್ಞಾನಿಗಳೆಂದರೆ ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರಗಳೆಂಬ ನಮ್ಮೊಳಗಿನ ಆರು ಪರಮವೈರಿಗಳ ಕೈಯಲ್ಲಿ ಗುಲಾಮರಾಗಿ ಆತ್ಮನ ಅಸ್ತಿತ್ವವನ್ನೇ ಮರೆತವರಾಗಿ ಹೀನ ಬದುಕನ್ನು ನಡೆಸುತ್ತಿರುವವರು ಎಂದರ್ಥ. ಹಾಗೆ ಬದುಕುವವರಿಗೆ ಹುಟ್ಟು ಮತ್ತು ಸಾವಿನ ನಡುವಿನ ಬದುಕು ಮಾತ್ರವೇ ಮುಖ್ಯವಾಗುತ್ತದೆ. ಆದುದರಿಂದಲೇ ಮತ್ತೆ ಮತ್ತೆ ಹುಟ್ಟು- ಸಾವಿನ ಆವರ್ತನಕ್ಕೆ ಸಿಲುಕಿಕೊಳ್ಳುವುದು ಪ್ರಾರಬ್ಧ ಕರ್ಮವಾಗುತ್ತದೆ. ಇದರಿಂದ ನಿವೃತ್ತಿಯನ್ನು ಹೊಂದಬೇಕಾದರೆ ಬದುಕಿನ ಕ್ಷಣಭಂಗುರತೆಯ ಅರಿವನ್ನು ಬೆಳೆಸಿಕೊಂಡು ಆತ್ಮನಲ್ಲಿ ಲೀನವಾಗುವ ಪ್ರಯತ್ನಕ್ಕೆ ಮುಂದಾಗಬೇಕು. ಬದುಕಿನಲ್ಲಿ ಸಮಸ್ತ ಸುಖ-ಸಂತೋಷ ದೊರಕುವುದು ಭೋಗದಲ್ಲಿ ಅಲ್ಲ ತ್ಯಾಗದಲ್ಲಿ ಎನ್ನುವ ಸತ್ಯವನ್ನು ಅರಿಯಬೇಕು