Home » ಮೋಕ್ಷದ ಮಾರ್ಗ
 

ಮೋಕ್ಷದ ಮಾರ್ಗ

by Kundapur Xpress
Spread the love

ದೇಹವೆಂಬ ರಥವನ್ನು ನಾವು ಮತ್ತೆ ಮತ್ತೆ ಪಡೆಯಲು ಕಾರಣ ಮೋಕ್ಷವೆಂಬ ಗುರಿಯನ್ನು ಯಶಸ್ವಿಯಗಿ ತಲುಪಲು ಆ ರಥವನ್ನು ನಾವು ಸರಿಯಾದ ರೀತಿಯಲ್ಲಿ ಬಳಸದೆ ಇರುವುದು ! ತನ್ನ ಭಕ್ತನು ತನ್ನನ್ನು ಸೇರಬೇಕೆಂಬುದೇ ದೇವರ ಅಪೇಕ್ಷೆಯಾಗಿದೆ. ಆದಕ್ಕಾಗಿ ದೇವರು ಭಕ್ತರಿಗೆ ಕೊಡುವ ವಾಹನವೇ ದೇಹವೆಂಬ ರಥ. ದೇವರು ಕೊಟ್ಟ ಈ ರಥ ಆತನ ಆಣತಿಯಂತೆ ಮೋಕ್ಷವೆಂಬ ಗುರಿಯನ್ನು ತಲುಪಲು ರಥಾರೂಢನಾಗಿರುವ ಆತ್ಮನು ಜಾಗೃತ ಸ್ಥಿತಿಯಲ್ಲಿರಬೇಕು. ಆದುದರಿಂದ ಆತ್ಮಶಕ್ತಿಯನ್ನು ಜಾಗೃತಗೊಳಿಸುವ ಮೂಲಕವೇ ಮೋಕ್ಷವೆಂಬ ಗುರಿಯನ್ನು ತಲುಪಲು ಸಾಧ್ಯ. ಇಲ್ಲದಿದ್ದರೆ ಹುಟ್ಟು-ಸಾವಿನ ಚಕ್ರದಲ್ಲಿ ನಿರಂತರವಾಗಿ ಸಿಲುಕಿಕೊಳ್ಳುವುದು ಅನಿವಾರ್ಯ. ಇದನ್ನು ತಪ್ಪಿಸಲು ಕರುಣಾ ಮಯಿಯಾದ ಭಗವಂತನು ಮತ್ತೆ ಮತ್ತೆ ದೇಹವೆಂಬ ರಥವನ್ನು ನಮಗೆ ಕೊಡುತ್ತಾನೆ. ಆದರೆ ಅಜ್ಞಾನಿಗಳಾದ ನಾವು ದೇವರ ಲೀಲೆಯನ್ನು ಅರಿಯದೆ ದೇಹಾಭಿಮಾನದಲ್ಲಿ ಅಹಂಭಾವದಿಂದ ಬೀಗುತ್ತಿರುತ್ತೇವೆ. ಐಹಿಕ ಸುಖವನ್ನು ಅನುಭವಿಸಲೆಂದೇ ಈ ಭೂಮಿ ಯಲ್ಲಿ ಜನಿಸಿ ಬಂದೆವು ಎಂಬ ಭ್ರಮೆಯನ್ನು ಬೆಳೆಸಿಕೊಳ್ಳುತ್ತೇವೆ. ‘ಈ ಜನ್ಮದಲ್ಲಿ ಸುಖವನ್ನು ಅನುಭವಿಸಿದ್ದೇ ಬಂತು, ಇನ್ನೊಂದು ಜನ್ಮ ಇದೆ ಎಂದು ಬಲ್ಲವರು ಯಾರು? ಆದುದರಿಂದ ಎಷ್ಟು ಸಾಧ್ಯವೋ ಅಷ್ಟು ಸುಖವನ್ನು ಇಲ್ಲಿ ಅನುಭವಿಸೋಣ’ ಎಂಬ ಸ್ವಾರ್ಥಪರ ಚಿಂತನೆಯನ್ನು ಬೆಳೆಸಿಕೊಂಡು ನಮಗರಿವಿಲ್ಲದೆ ದುಃಖಸಾಗರದಲ್ಲಿ ಮುಳುಗುತ್ತೇವೆ. ನಾವು ಬೆಳೆಸಿಕೊಂಡಿರುವ ಈ ಅಹಂಭಾವವೇ ನಮ್ಮನ್ನು ವಿನಾಶದೆಡೆಗೆ ಕೊಂಡೊಯ್ಯುತ್ತದೆ. ಅಧಿಕಾರ, ಅಂತಸ್ತು, ಐಶ್ವರ್ಯ, ಕೀರ್ತಿಯನ್ನು ತೀವ್ರವಾಗಿ ಬಯಸುತ್ತಾ ಐಹಿಕ ಸುಖಭೋಗಗಳ ಬೆನ್ನು ಹತ್ತುವಂತೆ ಮಾಡುವುದೇ ಈ ಅಹಂಭಾವದ ಕೆಲಸ. ನಿಜಕ್ಕಾದರೆ ಬದುಕಿನ ಉದ್ದೇಶ ಭೋಗವಲ್ಲ; ತ್ಯಾಗವೇ ಆಗಿದೆ. ಸಕಲ ಭವಬಂಧನಗಳಿಂದ ಪಾರಾಗಿ ದೇವರ ಸಾನ್ನಿಧ್ಯವನ್ನು ಸೇರುವುದೇ ಬದುಕಿನ ಗುರಿ.

   

Related Articles

error: Content is protected !!